ಬಿಡದಿ: ಪಟ್ಟಣದ ಬೆಂಗಳೂರು–ಮೈಸೂರು ಹೆದ್ದಾರಿ ಮೇಲೆ ಚರಂಡಿ ನೀರು ಹರಿಯುತ್ತಿದ್ದು ದುರ್ನಾತ ಬೀರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.
ಕಳೆದ ಒಂದು ವಾರದಿಂದ ಪಟ್ಟಣದ ಹೃದಯ ಭಾಗವಾದ ಬಿಡದಿ ಬಸ್ ನಿಲ್ದಾಣ ಮುಂದೆ ಚರಂಡಿ ನೀರು ಹರಿಯುತ್ತಿದೆ. ಪುರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಇದೇ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ–ಕಾಲೇಜಿಗೆ ವಿದ್ಯಾರ್ಥಿಗಳು ಹೋಗೇಬೇಕು. ಭೈರಮಂಗಲ, ಹಾರೋಹಳ್ಳಿ ಹಾಗೂ ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಸಾವಿರಾರು ಕಾರ್ಮಿಕರು ತೆರಳಬೇಕು. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೋಗ ಹರಡುವ ಭೀತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯ ಆಟೊ ಚಾಲಕ ಕುಮಾರ್.
‘ಬಸ್ ನಿಲ್ದಾಣದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗುತ್ತಿದೆ. ನಿರ್ಮಾಣದ ಸಮಯದಲ್ಲಿ ಚರಂಡಿಗೆ ಮಣ್ಣು ಹಾಗೂ ಹಳೆ ಕಟ್ಟಡದ ತ್ಯಾಜ್ಯ ಸುರಿಯಲಾಗಿದೆ’ ಎಂದು ಪ್ರಯಾಣಿಕ ಮಂಜುನಾಥ್ ದೂರಿದ್ದಾರೆ.