ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಶೆಡ್‌ನಿಂದ ಪಕ್ಕದ ಶಾಲೆಗೆ ತರಗತಿ ಸ್ಥಳಾಂತರ

ಗೌಸಿಯಾ ಮೊಹಲ್ಲಾದ ಶಿಥಿಲ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಬಿಇಒ ಭೇಟಿ
Published 19 ಜೂನ್ 2024, 16:02 IST
Last Updated 19 ಜೂನ್ 2024, 16:02 IST
ಅಕ್ಷರ ಗಾತ್ರ

ರಾಮನಗರ: ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದರಿಂದ ತೆರೆದ ಶೆಡ್‌ನಲ್ಲಿ ನಡೆಯುತ್ತಿದ್ದ ನಗರದ ಗೌಸಿಯಾ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ತರಗತಿಗಳನ್ನು, ಸಮೀಪದಲ್ಲಿರುವ ಮೌಲಾನ ಆಜಾದ್ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಸುಮಾರು 59 ವರ್ಷಗಳಷ್ಟು ಹಳೆಯದಾದ ಶಾಲಾ ಕಟ್ಟಡ ಬೀಳುವ ಸ್ಥಿತಿಯಲ್ಲಿತ್ತು. ಹಾಗಾಗಿ, ಶಾಲೆಯ ಆವರಣದಲ್ಲಿ ತೆರೆದ ಶೆಡ್‌ನಲ್ಲೇ ಶಿಕ್ಷಕರು ಮಳೆ–ಗಾಳಿ ಲೆಕ್ಕಿಸದೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಈ ಕುರಿತು, ‘ಪ್ರಜಾವಾಣಿ’ಯು ಜೂನ್ 19ರಂದು ‘ತೆರೆದ ಶೆಡ್‌ನಲ್ಲಿ ಮಕ್ಕಳಿಗೆ ಪಾಠ’ ವಿಶೇಷ ವರದಿ ಪ್ರಕಟಿಸಿ ಶಾಲೆ ದುಃಸ್ಥಿತಿಯ ಬಗ್ಗೆ ಗಮನ ಸೆಳೆದಿತ್ತು.

ವರದಿ ಬೆ‌ನ್ನಲ್ಲೇ ಬುಧವಾರ ಬೆಳಿಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಮತ್ತು ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಸಮಗ್ರ ಶಿಕ್ಷಣ ಅಭಿಯಾನದ ಉಪ ಯೋಜನಾ ಸಮನ್ವಯ ಅಧಿಕಾರಿ ನಿರ್ಮಲಾ ಅವರು ಶೆಡ್‌ನಲ್ಲಿ ನಡೆಯುತ್ತಿದ್ದ ಶಾಲೆಗೆ ಭೇಟಿ ನೀಡಿದರು. ಶಾಲಾ ಕಟ್ಟಡ ಮತ್ತು ತರಗತಿಗಾಗಿ ಮಾಡಿಕೊಂಡಿದ್ದ ತಾತ್ಕಾಲಿಕ ಶೆಡ್ ಪರಿಶೀಲಿಸಿದರು. ಮಕ್ಕಳಿಗೆ ಆಗುತ್ತಿರುವ ತೊಂದರೆ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿ, ಸಮೀಪದ ವಸತಿ ಶಾಲೆಗೆ ಗುರುವಾರದಿಂದಲೇ ಸ್ಥಳಾಂತರವಾಗುವಂತೆ ಸೂಚನೆ ನೀಡಿದರು.

2 ಕೊಠಡಿ ಮೀಸಲು: ‘ಗೌಸಿಯಾ ಮೊಹಲ್ಲಾದಲ್ಲೇ ಇರುವ ಮೌಲಾನ ಶಾಲೆಯ ಎರಡು ಕೊಠಡಿಗಳನ್ನು ಉರ್ದು ಶಾಲೆಯ 29 ವಿದ್ಯಾರ್ಥಿಗಳ ತರಗತಿಗಾಗಿ ಮೀಸಲಿರಿಸಲಾಗಿದೆ. ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಅಲ್ಲಿಯೇ ತರಗತಿಗಳು ನಡೆಯಲಿವೆ’ ಎಂದು ಸೋಮಲಿಂಗಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉರ್ದು ಶಾಲೆಯ ಒಂದು ಶಿಥಿಲ ಕಟ್ಟಡವನ್ನು ಈಗಾಗಲೇ ಕೆಡವಲಾಗಿದೆ. ಆ ಜಾಗದಲ್ಲಿ 3 ತರಗತಿ ಕೊಠಡಿ, ಒಂದು ಅಡುಗೆ ಮನೆ ಹಾಗೂ ಶೌಚಾಲಯವನ್ನು ಒಳಗೊಂಡ ನೂತನ ಕಟ್ಟಡ ನಿರ್ಮಿಸಲಾಗುವುದು. ಇಲಾಖೆಯ ಈ ವರ್ಷದ ಕ್ರಿಯಾಯೋಜನೆಯಲ್ಲಿ ಅದನ್ನು ಸೇರಿಸಿದ್ದೇವೆ. ಜೊತೆಗೆ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಶಾಲಾ ಕಟ್ಟಡ ನಿರ್ಮಿಸಿ ಕೊಡುವಂತೆ ಜಿಲ್ಲೆಯಲ್ಲಿರುವ ಕೆಲ ಕಾರ್ಪೊರೇಟ್ ಕಂಪನಿಗಳಿಗೂ ಮನವಿ ಮಾಡಲಾಗಿದೆ’ ಎಂದರು.

ಈ ವರ್ಷ ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಕ್ರಿಯಾಯೋಜನೆಯಲ್ಲಿ ಗೌಸಿಯಾ ಮೊಹಲ್ಲಾದಲ್ಲಿ ನೂತನ ಶಾಲೆ ನಿರ್ಮಾಣದ ವಿಷಯ ಸಹ ಸೇರಿಸಿದ್ದೇವೆ. ಅನುದಾನ ಬಂದ ತಕ್ಷಣ ಕಟ್ಟಡ ನಿರ್ಮಾಣ ಕಾರ್ಯ ಶುರುವಾಗಲಿದೆ.
ಪಿ. ಸೋಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT