ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉರಗ ತಜ್ಞರಿಗೂ ಬೇಕು ನೆರವು: ಜೀವವಿಮೆ, ಆರೋಗ್ಯ ವಿಮೆಗೆ ಮನವಿ

ಸುಧೀಂದ್ರ ಸಿ.ಕೆ.
Published 17 ಜೂನ್ 2024, 6:13 IST
Last Updated 17 ಜೂನ್ 2024, 6:13 IST
ಅಕ್ಷರ ಗಾತ್ರ

ಮಾಗಡಿ: ಪ್ರತಿದಿನ ಸಾವಿನ ಜತೆ ಸಾಹಸ ಮಾಡುವ ಉರಗ ತಜ್ಞರಿಗೆ ಸರ್ಕಾರ ಜೀವವಿಮೆ, ಆರೋಗ್ಯ ವಿಮೆ ಮೂಲಕ ಸಹಾಯಕ್ಕೆ ನಿಲ್ಲಬೇಕು ಎಂದು ಉಗರ ಪ್ರೇಮಿ ಸ್ನೇಕ್ ರಾಯ (ಹನುಮಂತರಾವ್) ಮನವಿ ಮಾಡಿದ್ದಾರೆ.

ಪಟ್ಟಣದ ಜ್ಯೋತಿನಗರದ ಮಂಜುನಾಥ್ ರಾವ್ ಮತ್ತು ಮಂಜುಳಾ ಬಾಯಿ ದಂಪತಿ ಎರಡನೇ ಪುತ್ರ ಸ್ನೇಕ್ ರಾಯ ಕಳೆದ ಎಂಟು ವರ್ಷಗಳಿಂದ ಮಾಗಡಿ ತಾಲ್ಲೂಕು ಸೇರಿದಂತೆ ಸುತ್ತಮುತ್ತಲಿನಲ್ಲಿ ಹಾವುಗಳ ರಕ್ಷಣೆ ಮಾಡುತ್ತಿದ್ದಾರೆ. ಇಲ್ಲಿವರೆಗೂ 5,873ಕ್ಕೂ ಹೆಚ್ಚು ವಿಷಕಾರಿ ಹಾವುಗಳನ್ನು ಹಿಡಿದು ಸಾವನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಶಾಲೆ, ಸಾರ್ವಜನಿಕ ಸ್ಥಳ, ದೇವಸ್ಥಾನ ಹಾಗೂ ಇತರ ಕಡೆ ಹಾವುಗಳು ಕಾಣಿಸಿಕೊಂಡರೆ ಅದನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವ ಕಾಯಕ ಇವರದ್ದು. ಹಾವುಗಳ ರಕ್ಷಣೆ ಮತ್ತು ಅದರ ಸಂತತಿ ಉಳಿಸುವ ನಿಟ್ಟಿನಲ್ಲೂ ಶ್ರಮಿಸುತ್ತಿದ್ದಾರೆ. 

ರಾಜ್ಯದಲ್ಲಿ ಸಾಕಷ್ಟು ಉರಗ ತಜ್ಞರು ತಮ್ಮ ಪ್ರಾಣ ಪಣಕ್ಕಿಟ್ಟು ವಿಷಕಾರಿ ಹಾವುಗಳನ್ನು ಹಿಡಿಯುತ್ತಾರೆ. ಒಂದು ವೇಳೆ ಹಾವು ಕಚ್ಚಿ ಸಾವನ್ನಪ್ಪಿದ್ದರೆ ಆ ಕುಟುಂಬಕ್ಕೆ ರಕ್ಷಣೆ ಇಲ್ಲವಾಗಿದೆ. ಅರಣ್ಯ ಇಲಾಖೆ ಕೇವಲ ಉರಗ ರಕ್ಷಕ ಎಂದು ಗುರುತಿನ ಚೀಟಿ ನೀಡಿದರೆ ಇದರಿಂದ ಯಾವುದೇ ರೀತಿ ಪ್ರಯೋಜನವಾಗುವುದಿಲ್ಲ. ಸರ್ಕಾರ ತಿಂಗಳಿಗೆ ಇಂತಿಷ್ಟು ಹಣವನ್ನು ಸಂಬಳದ ರೀತಿ ನೀಡಿದರೆ ಹಾವು ಹಿಡಿಯಲು ದೂರದ ಊರುಗಳಿಗೆ ತೆರಳುವ ವೆಚ್ಚಕ್ಕೆ ಸಹಾಯವಾಗಲಿದೆ ಎಂದು ಹೇಳುತ್ತಾರೆ.

ಜೂನ್, ಜುಲೈ ಮಳೆಗಾಲದಲ್ಲಿ ಹೆಚ್ಚು ಹಾವುಗಳು ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಮೊಟ್ಟೆಯಿಂದ ಮರಿಗಳು ಆಚೆ ಬರುವ ಸಮಯ. ಮರಿಗಳು ಸುರಕ್ಷಿತ ಪ್ರದೇಶ ಹುಡುಕಿಕೊಳ್ಳುವ ನಿಟ್ಟಿನಲ್ಲಿ ಮನೆಗಳ ಹತ್ತಿರ ಕಾಣಿಸಿಕೊಳ್ಳುತ್ತವೆ. ಶೂ, ಚಪ್ಪಲಿ, ಹೂವಿನ ಕುಂಡಗಳಲ್ಲಿ ಮರಿಗಳು ಬಂದು ಸೇರುತ್ತವೆ. ಸಣ್ಣ-ಪುಟ್ಟ ಕೀಟಗಳನ್ನು ತಿನ್ನಲು ಮನೆ ಸುತ್ತಮುತ್ತ ಕಾಣಿಸಿಕೊಳ್ಳುತ್ತವೆ. ಸಾರ್ವಜನಿಕರು ಎಚ್ಚರದಿಂದ ಇರಬೇಕು ಎನ್ನುತ್ತಾರೆ ಅವರು.

ಹಾವು ರೈತ ಸ್ನೇಹಿ. ಹೊಲದಲ್ಲಿ ಹೆಚ್ಚಾಗಿ ರೈತರಿಗೆ ತೊಂದರೆ ಕೊಡುವ ಇಲಿಗಳನ್ನು ಹಾವು ತಿಂದು ರೈತರ ಬೆಳೆಯನ್ನು ರಕ್ಷಿಸುತ್ತವೆ ಎನ್ನುತ್ತಾರೆ ಸ್ನೇಕ್‌ ರಾಯ.

ಕೇರಳದ ವಾ.ವಾ ಸುರೇಶ್ ನೋಡಿ ಕಲಿತೆ: ‘ಕೇರಳದ ಹೆಸರಾಂತ ಉರಗ ತಜ್ಞ ವಾ.ವಾ ಸುರೇಶ್  ಸಂದರ್ಶನವನ್ನು ಟಿ.ವಿಯಲ್ಲಿ ನೋಡಿ ಹಾವು ಹಿಡಿಯುವುದನ್ನು ಕಲಿತೆ. ಅವರು ಹೇಳಿಕೊಟ್ಟ ಮಾರ್ಗದರ್ಶನದಂತೆ 5,000 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತ ಪ್ರದೇಶಗಳಿಗೆ ಬಿಟ್ಟಿದ್ದೇನೆ‘ ಎನ್ನುತ್ತಾರೆ ಅವರು.

ಸಂಪರ್ಕ: 7022867663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT