ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಸಾಫ್ಟ್ ಸಿಲ್ಕ್ ಘಟಕ: ಮಹೇಶ್

ಚನ್ನಪಟ್ಟಣದ ಕೆಎಸ್‌ಐಸಿ ಕಾರ್ಖಾನೆಗೆ ಭೇಟಿ, ಪರಿಶೀಲನೆ
Last Updated 2 ಜುಲೈ 2018, 16:17 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪಟ್ಟಣದಲ್ಲಿ ₹ 8 ಕೋಟಿ ವೆಚ್ಚದಲ್ಲಿ ಮತ್ತೊಂದು ಸಾಫ್ಟ್ ಸಿಲ್ಕ್ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಸೋಮವಾರ ಪಟ್ಟಣದ ಕೆಎಸ್‌ಐಸಿ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ‘ಈಗಾಗಲೇ ಒಂದು ಸಾಫ್ಟ್ ಸಿಲ್ಕ್ ಘಟಕ ಕಾರ್ಯಾರಂಭ ಮಾಡಲಾಗಿದೆ. ಇದರ ಜೊತೆಗೆ ಇನ್ನೊಂದು ಯೂನಿಟ್ ಸ್ಥಾಪನೆ ಮಾಡಿದರೆ ಇಲ್ಲಿನ ಜನರಿಗೆ ಉದ್ಯೋಗದ ಅವಕಾಶ ದೊರೆಯುತ್ತದೆ’ ಎಂದರು.

ಸತತ ನಷ್ಟದಿಂದಾಗಿ ಪಟ್ಟಣದ ಕಾರ್ಖಾನೆಯನ್ನು ಈ ಹಿಂದೆ ಮುಚ್ಚಲಾಗಿತ್ತು. ಪುನರಾರಂಭ ಮಾಡುವ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಇದು ಮುಖ್ಯಮಂತ್ರಿಗಳ ಕ್ಷೇತ್ರವಾಗಿರುವುದರಿಂದ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಈ ಕಾರ್ಖಾನೆ ಪ್ರಾರಂಭವಾದರೆ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ ಎಂದರು.

ಕಾರ್ಖಾನೆ ಶಿಥಿಲವಾಗಿರುವ ಕೆಲವು ಕಟ್ಟಡಗಳನ್ನು ತೆರವುಗೊಳಿಸಿ ಅಲ್ಲಿನ ಉದ್ಯಾನವನವನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ. ಹೊಸ ಕಟ್ಟಡವನ್ನು ನಿರ್ಮಾಣ ಮಾಡಿ ಹೊಸ ಯಂತ್ರಗಳನ್ನು ಅಳವಡಿಸಿ ಕಾರ್ಖಾನೆ ಆರಂಭಿಸಲಾಗುವುದು ಎಂದರು.

ಹಾಗೆಯೆ ಹೈಟೆಕ್ ರೇಷ್ಮೆ ಮಾರಾಟ ಮಳಿಗೆಗಳನ್ನು ತೆರೆದು ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ ಎಂದರು.ರೇಷ್ಮೆ ಮಾರುಕಟ್ಟೆಗೆ ಭೇಟಿ: ಕಾರ್ಖಾನೆಯ ಭೇಟಿಯ ನಂತರ ಪಟ್ಟಣದ ರೇಷ್ಮೆಗೂಡಿನ ಮಾರುಕಟ್ಟೆಗೆ ಸಚಿವರು ಭೇಟಿ ನೀಡಿದರು.

ಈ ವೇಳೆ ರೈತರು ರೇಷ್ಮೆ ಗೂಡಿನ ಬೆಲೆ ಹಾಗೂ ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಸಚಿವರ ಗಮನ ಸೆಳೆದು ಪರಿಹಾರ ಒದಗಿಸುವಂತೆ ಆಗ್ರಹಿಸಿದರು. ಪ್ರತಿ ಕಿಲೋ ರೇಷ್ಮೆಗೂಡಿಗೆ ಕೇವಲ ₹ 200 ಬೆಲೆ ಇದೆ. ಚೀನಾದಿಂದ ಬರುತ್ತಿರುವ ರೇಷ್ಮೆಗೂಡಿನಿಂದಾಗಿ ಇಲ್ಲಿಯ ರೈತರು ತೊಂದರೆ ಅನುಭವಿಸುವಂತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗೆ ಕನಿಷ್ಠ ಬೆಲೆಯೂ ಸಿಗದೆ ಕೊಟ್ಟಷ್ಟು ಪಡೆದು ಹೋಗಬೇಕಾದ ಪರಿಸ್ಥಿತಿ ಇದೆ. ರೇಷ್ಮೆಗೂಡಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಪಡಿಸಿದರು.

ಸಚಿವರು ರೈತರನ್ನು ಸಮಾಧಾನಪಡಿಸಿ, ಚೀನಾದಿಂದ ಬರುತ್ತಿರುವ ರೇಷ್ಮೆಯಿಂದಾಗಿ ಇಲ್ಲಿನ ರೇಷ್ಮೆ ಬೆಳೆಗೆ ಬೆಲೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್, ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮಹೇಂದ್ರ ಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT