ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಲೂರು ಗ್ರಾಮ ಸಭೆ

Published 7 ಮಾರ್ಚ್ 2024, 6:24 IST
Last Updated 7 ಮಾರ್ಚ್ 2024, 6:24 IST
ಅಕ್ಷರ ಗಾತ್ರ

ಕುದೂರು: ಸೋಲೂರು ಗ್ರಾಮ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸೋಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಜಾಯಿದ್ ಪಾಷಾ ಹೇಳಿದರು.

ಸೋಲೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸೋಲೂರು ಗ್ರಾಮ ದಿನೇ ದಿನೇ ಬೆಳೆಯುತ್ತಿದೆ. ಅದರಂತೆ ಗ್ರಾಮ ಪಂಚಾಯಿತಿ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ ಸೇರಿದಂತೆ ಮೂಲಸೌಕರ್ಯ ಸೌಲಭ್ಯ ಒದಗಿಸಲಾಗುತ್ತಿದೆ. ನಾಗರಿಕರು ಕಾಲಕಾಲಕ್ಕೆ ತಪ್ಪದೆ ಕಡ್ಡಾಯವಾಗಿ ತೆರಿಗೆ ಪಾವತಿಸುವ ಮೂಲಕ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನೋಡಲ್ ಅಧಿಕಾರಿ ಸಿಡಿಪಿಒ ಬಿ.ಎಲ್. ಸುರೇಂದ್ರ ಮಾತನಾಡಿ, ಗ್ರಾಮ ಪಂಚಾಯಿತಿ ಮತ್ತು ಸರ್ಕಾರದ ಅನುದಾನ ಕಡಿಮೆಯಿಂದಾಗಿ ನರೇಗಾ ಯೋಜನೆಯಲ್ಲಿ ಹೆಚ್ಚು ಅನುದಾನದ ಲಭ್ಯತೆ ಇರುವುದರಿಂದ, ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಎರೆಹುಳು ತೊಟ್ಟಿ ನಿರ್ಮಾಣ, ಕೈತೋಟ, ಇಂಗು ಗುಂಡಿ, ಸಮುದಾಯ ಕಾಮಗಾರಿಗಳಾದ ರಸ್ತೆ, ಚರಂಡಿ, ಸ್ಮಶಾನ ಅಭಿವೃದ್ದಿಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಗ್ರಾಮದ ಅಭಿವೃದ್ದಿಗೆ ಮುಂದಾಗುವಂತೆ ತಿಳಿಸಿದರು.

ನರೇಗಾ ಲೆಕ್ಕಪರಿಶೋಧಕಿ ಶಿವಮ್ಮ ಮಾತನಾಡಿ, ಗ್ರಾಮಗಳ ಜನರು ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ನರೇಗಾ ಯೋಜನೆ ಅನುಷ್ಟಾನಗೊಳಿಸಿ 100 ದಿನಗಳ ಕೆಲಸ ನೀಡಲಾಗುತ್ತಿದೆ. ಇದರಿಂದ ವೈಯಕ್ತಿಕ ಕಾಮಗಾರಿ ಮತ್ತು ಸಮುದಾಯ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದರು.

ಪಿಡಿಒ ಬೆಟ್ಟಸ್ವಾಮಿ ಮಾತನಾಡಿ, ಬೇಸಿಗೆ ಸಮೀಪಿಸಿದ್ದು, ಕುಡಿಯುವ ನೀರಿಗೆ ತೊಂದರೆ ಬಾರದಂತೆ ಈಗಾಗಲೇ ಕ್ರಮ ವಹಿಸಲಾಗಿದೆ. ಯಾವುದಾದರೂ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದರೆ ಸಮಸ್ಯೆ ಬಗೆಹರಿಸಲಾಗುವುದು. ಚಿಕ್ಕಯ್ಯನಪಾಳ್ಯ, ಕಲ್ಯಾಣಪುರ, ಚಿಕ್ಕಸೋಲೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಪರ್ಯಾಯವಾಗಿ ಖಾಸಗಿ ಕೊಳವೆ ಬಾವಿಯಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಎಚ್.ಪಿ. ರಾಘವೇಂದ್ರ, ಬಸಪ್ಪಜೀ, ಕಮಲಮ್ಮ, ಸವಿತಾ, ಕಾಮರಾಜು, ಸಂತೋಷ್, ಕಾರ್ಯದರ್ಶಿ ಕೃಷ್ಣಪ್ಪ, ಸುರೇಶ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT