ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

289 ಗ್ರಾಮಗಳಿಗೆ ಶಾಶ್ವತ ನೀರಿನ ಸೌಲಭ್ಯ: ಡಾ. ಸಿ.ಎನ್.‌ಅಶ್ವತ್ಥನಾರಾಯಣ

ಶ್ರೀರಂಗ ಯೋಜನೆ ಪರಿಷ್ಕರಣೆಗೆ ಸಚಿವ ಸಂಪುಟ ಒಪ್ಪಿಗೆ
Last Updated 3 ಸೆಪ್ಟೆಂಬರ್ 2020, 15:54 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕುಗಳ 83 ಕೆರೆಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರನ್ನು ಹರಿಸುವ 450 ಕೋಟಿ ವೆಚ್ಚದ ಪರಿಷ್ಕೃತ ಶ್ರೀರಂಗ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

ಈಗಾಗಲೇ ಯೋಜನೆಗೆ ₹277 ಕೋಟಿ ಬಿಡುಗಡೆ ಮಾಡಲಾಗಿದೆ. ಯೋಜನೆಗೆ ಮತ್ತಷ್ಟು ಸಂಪನ್ಮೂಲದ ಅಗತ್ಯವಿತ್ತು. ಹೀಗಾಗಿ ಅಗತ್ಯವಿದ್ದ ₹173 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಈ ಬಗ್ಗೆ ಮಾಡಲಾಗಿದ್ದ ಮನವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಮೊದಲೇ ಆರಂಭವಾಗಿದ್ದ ಯೋಜನೆಯ ಕಾಮಗಾರಿಯನ್ನು ಅತ್ಯಂತ ವೇಗಗತಿಯಲ್ಲಿ ನಡೆಸಲಾಗುತ್ತಿದ್ದು, ಅಗತ್ಯವಿದ್ದ ಮತ್ತಷ್ಟು ನಿರ್ವಹಣಾ ವ್ಯವಸ್ಥೆ ಹಾಗೂ ಮತ್ತಿತರೆ ಪೂರಕ ವ್ಯವಸ್ಥೆಗಳನ್ನು ಮಾಡುವ ಉದ್ದೇಶದಿಂದ ಪರಿಷ್ಕೃತ ಯೋಜನೆಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪಂಪ್‌ ಹೌಸ್, ‌ವಿದ್ಯುತ್‌ ಉಪಕೇಂದ್ರ: 195 ಕಿ.ಮೀ ದೂರದಿಂದ ನೀರು ಪೂರೈಕೆಯಾಗಬೇಕಿದ್ದು, ಅದಕ್ಕಾಗಿ ಪ್ರತ್ಯೇಕ ಪಂಪ್‌ ಹೌಸ್‌ ಮತ್ತು ವಿದ್ಯುತ್‌ ಉಪಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಜತೆಗೆ, ನೀರನ್ನು ಸರಬರಾಜು ಮಾಡುವ ಪಿಎಸ್ಸಿ ಪೈಪುಗಳು ವಿರಳವಾಗಿದ್ದು, ಅವುಗಳನ್ನು ಕಾಲಮಿತಿಯೊಳಗೆ ಖರೀದಿಸಿ ಯೋಜನೆಯನ್ನು ಕಾರ್ಯಗತ ಮಾಡಬೇಕಾಗಿದೆ. ವಿವಿಧೆಡೆ ಭೂಸ್ವಾಧೀನ ಕಷ್ಟವಾಗಿರುವ ಕಾರಣ ಯೋಜನೆಯ ವೆಚ್ಚ ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಕಾವೇರಿ ನೀರಾವರಿ ನಿಗಮ ಸಲ್ಲಿಸಿರುವ ಪರಿಷ್ಕೃತ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.

ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಎರಡೂ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಯಲಿದೆ. ಈ ಯೋಜನೆಯಿಂದ ಎರಡೂ ತಾಲ್ಲೂಕುಗಳ ಜಲಕ್ಷಾಮ ಶಾಶ್ವತವಾಗಿ ನಿವಾರಣೆಯಾಗಲಿದೆ. ಇದರಿಂದ ಆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಹಾಗೂ ಕೃಷಿ ಚಟುವಟಿಕೆ ಉತ್ತಮವಾಗಿ ಗರಿಗೆದರಲಿದೆ ಎಂದರು.

172 ಕ್ಯೂಸೆಕ್‌ ನೀರು
ಒಟ್ಟು ಉದ್ದೇಶಿತ ಪ್ರದೇಶಗಳಿಗೆ ಒಟ್ಟು 172.19 ಕ್ಯೂಸೆಕ್‌ ನೀರನ್ನು ಹರಿಸಲಾಗುವುದು. ಮಾಗಡಿ ತಾಲ್ಲೂಕಿನ 68 ಕೆರೆಗಳು ಹಾಗೂ ಕುಣಿಗಲ್‌ ತಾಲ್ಲೂಕಿನ ಹುತ್ತರಿದುರ್ಗ ಹೋಬಳಿಯ 15 ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ಸುಮಾರು 289 ಗ್ರಾಮಗಳಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಅಭಾವ ನೀಗಲಿದೆ ಎಂದು ಡಾ. ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ರಾಜ್ಯದ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ಬಿಕ್ಕಟ್ಟು ಇರಬಾರದು ಎಂಬುದೇ ಸರಕಾರದ ಉದ್ದೇಶವಾಗಿದೆ. ಹೀಗಾಗಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದರ ಜತೆಗೆ, ಈಗಾಗಲೇ ಕಾರ್ಯಗತವಾಗುತ್ತಿರುವ ಯೋಜನೆಗಳನ್ನು ವೇಗವಾಗಿ ಮುಗಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT