ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ರಾಮನಗರ ಜಿಲ್ಲೆಯ 20 ಅಧಿಕಾರಿಗಳನ್ನು ಬೇರೆ ಪಂಚಾಯಿತಿಗಳಿಗೆ ನಿಯೋಜನೆ ಮಾಡಿ ಹೊರಡಿಸಿದ್ದ ಆದೇಶಕ್ಕೆ ಪಂಚಾಯತ್ ರಾಜ್ ಇಲಾಖೆ ಆಯುಕ್ತರು ತಡೆ ಒಡ್ಡಿದ್ದಾರೆ.
ರಾಮನಗರ ಜಿಲ್ಲೆಯ 18 ಗ್ರಾಮ ಪಂಚಾಯಿತಿಗಳ 13 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ 7 ಗ್ರೇಡ್–1 ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 20 ಅಧಿಕಾರಿಗಳನ್ನು ಬೇರೆ ಪಂಚಾಯಿತಿಗಳಿಗೆ ನಿಯೋಜನೆ ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಇದೇ ಆಗಸ್ಟ್ 7ರಂದು ಆದೇಶ ಹೊರಡಿಸಿದ್ದರು.
ರಾಜ್ಯ ವೃಂದದ ಅಧಿಕಾರಿಗಳಾಗಿರುವ ಪಿಡಿಒ ಮತ್ತು ಕಾರ್ಯದರ್ಶಿಗಳ ನಿಯೋಜನೆ ಆದೇಶಕ್ಕೂ ಮುಂಚೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವೂ ಆಗಿರುವ ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯದ ಗಮನಕ್ಕೆ ತರಬೇಕಿತ್ತು.
ಆದರೆ, ರಾಮನಗರ ಜಿ.ಪಂ ಸಿಇಒ ಬೋಡ್ಕೆ ಅವರು ಈ ವಿಷಯವನ್ನು ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯದ ಗಮನಕ್ಕೆ ತಾರದೆ ಆದೇಶ ಹೊರಡಿಸಿದ್ದರು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಅರುಂಧತಿ ಚಂದ್ರಶೇಖರ್ ಆಗಸ್ಟ್ 14 ರಂದು ನಿಯೋಜನೆ ಆದೇಶಕ್ಕೆ ತಡೆ ಹಿಡಿದಿದ್ದಾರೆ.
ಉಪ ಚುನಾವಣೆ ಎದುರು ನೋಡುತ್ತಿರುವ ಚನ್ನಪಟ್ಟಣ ತಾಲ್ಲೂಕಿನಲ್ಲೇ ಒಂಬತ್ತು ಪಿಡಿಒ ಹಾಗೂ ಇಬ್ಬರು ಗ್ರೇಡ್–1 ಕಾರ್ಯದರ್ಶಿಗಳು, ಕನಕಪುರ ತಾಲ್ಲೂಕಿನಲ್ಲಿ ನಾಲ್ವರು ಪಿಡಿಒ ಮತ್ತು ನಾಲ್ವರು ಕಾರ್ಯದರ್ಶಿಗಳು ಹಾಗೂ ರಾಮನಗರ ತಾಲ್ಲೂಕಿನ ಒಬ್ಬ ಪಿಡಿಒ ಅನ್ನು ಬೇರೆಡೆಗೆ ನಿಯೋಜಿಸಲಾಗಿತ್ತು.
ಇದರಲ್ಲಿ ಏಳು ಕಾರ್ಯದರ್ಶಿಗಳಿಗೆ ಪ್ರಭಾರ ಪಿಡಿಒ ಜವಾಬ್ದಾರಿ ನೀಡಲಾಗಿತ್ತು. ಸಂಬಂಧಿಸಿದ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ನಿಯೋಜನೆ ಪಟ್ಟಿಯಲ್ಲಿರುವವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿತ್ತು.