ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಹಾಲಿನ ಪ್ರೋತ್ಸಾಹಧನ ಸ್ಥಗಿತ

Published 6 ಜೂನ್ 2023, 3:24 IST
Last Updated 6 ಜೂನ್ 2023, 3:24 IST
ಅಕ್ಷರ ಗಾತ್ರ

ಓದೇಶ ಸಕಲೇಶಪುರ

ರಾಮನಗರ: ಹಾಲು ಉತ್ಪಾದಕರಿಗೆ ಸಿಗಬೇಕಾದ ₹5 ಪ್ರೋತ್ಸಾಹಧನ ಕಳೆದ ಏಳು ತಿಂಗಳಿಂದ ಸ್ಥಗಿತಗೊಂಡಿದೆ. ಇಂದಲ್ಲ, ನಾಳೆ ಪ್ರೋತ್ಸಾಹಧನ ಬರಲಿದೆ ಎಂದು ಎದುರು ನೋಡುತ್ತಿದ್ದ ರೈತರಿಗೆ ಹೊಸ ಸರ್ಕಾರ ಬಂದರೂ, ಕಾಯುವುದು ಮಾತ್ರ ತಪ್ಪಿಲ್ಲ.

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡಿರುವ ರೈತರಿಗೆ ಪ್ರತಿ ತಿಂಗಳು ಸಿಗುವ ಪ್ರೋತ್ಸಾಹಧನವೇ ಆಧಾರ. ಆ ಮೊತ್ತ ಸಹ ಸಕಾಲಕ್ಕೆ ಬಾರದೆ ಇರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಉಳಿಯುವುದು ಈ ಮೊತ್ತವಷ್ಟೇ: ‘ಪ್ರತಿ ಲೀಟರ್ ಹಾಲಿಗೆ ಸಿಗುವ ದರವು ರಾಸುಗಳ ನಿರ್ವಹಣೆಗೆ ಸರಿ ಹೋಗುತ್ತದೆ. ಪಶು ಆಹಾರ ದಿನದಿಂದ ದಿನಕ್ಕೆ ಗಗನಮುಖಿಯಾಗಿದೆ. ಡೇರಿಗೆ ಹಾಕುವ ಹಾಲಿನಿಂದ ಬರುವ ಮೊತ್ತ ನಿರ್ವಹಣೆಗೆ ಖರ್ಚಾಗುತ್ತದೆ. ಕೈಯಲ್ಲಿ ಉಳಿಯುವುದು ಪ್ರೋತ್ಸಾಹಧನ ಮಾತ್ರ’ ಹನುಮಂತೇಗೌಡನ ದೊಡ್ಡಿಯ ರೈತ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯ ಏಳೆಂಟು ಲೀಟರ್ ಹಾಲು ಕೊಡುವೆ ಒಂದು ಹಸುವಿನ ನಿರ್ವಹಣೆಗೆ ತಿಂಗಳಿಗೆ ಕನಿಷ್ಠ ₹5 ಸಾವಿರ ಬೇಕು. ಜೊತೆಗೆ, ರಾಸುಗಳಿಗೆ ಬರುವ ರೋಗ ನಿರ್ವಹಣೆಗೂ ಹಣ ತೆತ್ತಬೇಕು. ರೈತರಿಗೆ ನಿತ್ಯ ನಿರ್ವಹಣೆ ವೆಚ್ಚವೇ ಜಾಸ್ತಿಯಾಗಿದೆ. ಹಾಗಾಗಿ, ಸಕಾಲಕ್ಕೆ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸಾಮಾನ್ಯ ವರ್ಗಕ್ಕೆ ಬಾಕಿ: 

‘ಅನಿವಾರ್ಯ ಕಾರಣಗಳಿಂದಾಗಿ ಕಳೆದ ಅಕ್ಟೋಬರ್‌ನಿಂದ ಸಾಮಾನ್ಯ ವರ್ಗಕ್ಕೆ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ. ಎಸ್‌ಸಿ ಮತ್ತು ಎಸ್‌ಟಿ ವರ್ಗಕ್ಕೆ ಬಿಡುಗಡೆಯಾಗಿದೆ. ಸಾಮಾನ್ಯ ವರ್ಗಕ್ಕೆ ಪಶು ಸಂಗೋಪನೆ ಇಲಾಖೆಯಿಂದ ಪಾವತಿಯಾಗಬೇಕಿದೆ’ ಎಂದು ಬಮುಲ್ ಪ್ರಧಾನ ವ್ಯವಸ್ಥಾಪಕ ಡಾ. ಎಂ.ಗಂಗಯ್ಯ ಹೇಳಿದರು.

‘ರೈತರಿಗೆ ಮಾಸಿಕ ಬಿಡುಗಡೆಯಾಗಬೇಕಾದ ಪ್ರೋತ್ಸಾಹಧನದ ವರದಿಯನ್ನು ಮುಖ್ಯ ಕಚೇರಿಗೆ ತಪ್ಪದೆ ಕಳಿಸಿ ಕೊಡುತ್ತೇವೆ. ಸರ್ಕಾರದಿಂದ ಕೆಎಂಎಫ್‌ಗೆ ಹಣ ಬಂದಿಲ್ಲದಿರುವುದಿಂದ ಪ್ರೋತ್ಸಾಹಧನ ಬಿಡುಗಡೆ ವಿಳಂಬವಾಗಿದೆ ಎಂದು ಮೇಲಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT