‘ಅನ್ಯ ಕೆಲಸಗಳ ಭಾರಕ್ಕೆ ನಲುಗಿದ್ದೇವೆ’
‘ಅನ್ಯ ಕೆಲಸಗಳ ಭಾರಕ್ಕೆ ಶಿಕ್ಷಕರು ಈಗಾಗಲೇ ನಲುಗಿದ್ದಾರೆ. ಇದನ್ನು ಮನಗಂಡ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಅನ್ಯ ಕಾರ್ಯಗಳಿಗೆ ಹಾಗೂ ತರಬೇತಿಗಳಿಗೆ ಬಳಸಬಾರದು ಎಂದು ಆದೇಶ ಹೊರಡಿಸಿದ್ದಾರೆ. ಇದರ ನಡುವೆಯೇ ಬಿಎಲ್‌ಒ ಹುದ್ದೆಗೆ ಶಿಕ್ಷಕರನ್ನು ನೇಮಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಿಕ್ಷಕರು ಶೈಕ್ಷಣಿಕ ಚಟುವಟಿಕೆ ಬದಲು ಬೇರೆ ಕೆಲಸಗಳಿಗೆ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಇದರಿಂದ ಮಕ್ಕಳ ಕಲಿಕೆ ಕುಂಠಿತವಾಗಿ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಬಿಎಲ್‌ಒ ಹುದ್ದೆಗಳಿಂದ ಶಿಕ್ಷಕರಿಗೆ ಮುಕ್ತಿ ನೀಡಬೇಕು’ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಆಗ್ರಹಿಸಿದರು.