ಭಾನುವಾರ, ಆಗಸ್ಟ್ 18, 2019
21 °C

ದೇವಾಲಯ ತೆರವು: ಕಾಲಾವಕಾಶಕ್ಕೆ ಮನವಿ

Published:
Updated:
Prajavani

ಕನಕಪುರ: ಇಲ್ಲಿನ ಪೇಟೆ ಕೆರೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲ ತೆರವುಗೊಳಿಸಲು ಕಾಲಾವಕಾಶ ನೀಡಬೇಕು ಎಂದು ಅಯ್ಯಪ್ಪಸ್ವಾಮಿ ದೇವಾಲಯ ಸಮಿತಿ ಸದಸ್ಯರು ತಹಶೀಲ್ದಾರ್‌ ಅವರಲ್ಲಿ ಮನವಿ ಮಾಡಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ತೆರವುಗೊಳಿಸುವ ಸಂಬಂಧ ಬುಧವಾರ ತಹಶೀಲ್ದಾರ್‌ ಎಂ.ಆನಂದಯ್ಯ ಅವರೊಂದಿಗೆ ಸಮಿತಿ ಸದಸ್ಯರು ಚರ್ಚೆ ನಡೆಸಿದರು.

‘ಅಯ್ಯಪ್ಪಸ್ವಾಮಿ ದೇವಾಲಯವನ್ನು,  ಪೇಟೆ ಕೆರೆ ಜಾಗ ಒತ್ತುವರಿ ಮಾಡಿ ಕಟ್ಟಲಾಗಿದೆ. ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಆದೇಶ ನೀಡಿರುವುದರಿಂದ ತೆರವುಗೊಳಿಸಬೇಕಿದೆ’ ಎಂದು ತಹಶೀಲ್ದಾರ್‌ ಎಂ.ಆನಂದಯ್ಯ ತಿಳಿಸಿದರು.

‘ಏಕಾಏಕಿ ದೇವಾಲಯವನ್ನು ತೆರವುಗೊಳಿಸಬೇಕೆಂದರೆ ಹೇಗೆ ಸಾಧ್ಯ. ಲಕ್ಷಾಂತರ ಭಕ್ತರು ಆರಾಧಿಸುವ ಅಯ್ಯಪ್ಪಸ್ವಾಮಿ ದೇವರನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸ್ಥಳಾಂತರಿಸಬೇಕಿದೆ. ಸಮಿತಿಯವರು ಕಾಲಾವಕಾಶ ನೀಡಬೇಕು. ಪೂಜೆ–ಪುನಸ್ಕಾರ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವರ ವಿಗ್ರಹವನ್ನು ಸ್ಥಳಾಂತರಿಸಲಾಗುವುದು. ಬೇರೆ ಕಡೆ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣ ಮಾಡಲು ತಾಲ್ಲೂಕು ಆಡಳಿತ ಮತ್ತು ನಗರಸಭೆಯವರು ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕು’ ಎಂದು ಸಮಿತಿಯ ಮಂಜಣ್ಣ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ‘ದೇವಾಲಯ ತೆರವುಗೊಳಿಸುವುದು, ಬಿಡುವುದು ನಮ್ಮ ವ್ಯಾಪ್ತಿಯಲ್ಲಿಲ್ಲ. ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಿರುವುದರಿಂದ ಹೆಚ್ಚು ಕಾಲಾವಕಾಶ ನೀಡಲು ಆಗುವುದಿಲ್ಲ. ಪೇಟೆ ಕೆರೆಯಲ್ಲಿ ಒತ್ತುವರಿಯಾಗಿರುವ ತೋಟಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗವನ್ನೂ ತೆರವುಗೊಳಿಸಲಾಗುತ್ತಿದೆ. ಅಷ್ಟರೊಳಗೆ ಅಯ್ಯಪ್ಪಸ್ವಾಮಿ ವಿಗ್ರಹವನ್ನು ಸ್ಥಳಾಂತರಿಸಬೇಕು. ವಿಗ್ರಹವನ್ನು ಮುಜರಾಯಿ ದೇವಾಲಯದಲ್ಲಿ ಇಡಲು ಅವಕಾಶ ಮಾಡಿಕೊಡಲಾಗುವುದು’ ಎಂದರು.

‘ಸೂಕ್ತ ಜಾಗ ಗುರುತಿಸಿ, ಆಡಳಿತಾತ್ಮಕವಾಗಿ ಅನುಮೋದನೆ ಪಡೆದು, ಶೀಘ್ರವಾಗಿ ದೇವಾಲಯಕ್ಕೆ ಸ್ಥಳ ಮಂಜೂರು ಮಾಡಲಾಗುವುದು’ ಎಂದು ಅವರು ಭರವಸೆ ನೀಡಿದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಮಲ್ಲೇಶ್‌, ಸಬ್‌ ಇನ್‌ಸ್ಪೆಕ್ಟರ್‌ ಅನಂತರಾಮ್‌, ದೇವಸ್ಥಾನ ಸಮಿತಿಯ ಕೃಷ್ಣಪ್ಪ, ಮರುಸ್ವಾಮಿ, ಚೌಲ್ಟ್ರಿ ಕೃಷ್ಣಪ್ಪ, ಮೋಹನ್‌, ಶೇಖರ್‌, ಗೋವಿಂದಪ್ಪ, ಶೆಟ್ಟಿಬಾಬು, ಆನಂದ, ಕಾಂತರಾಜು, ನಾಗರಾಜು ಇದ್ದರು.

Post Comments (+)