ಬುಧವಾರ, ನವೆಂಬರ್ 13, 2019
22 °C
ಕಾಮಸಾಗರದಲ್ಲಿ ಮಾರಮ್ಮದೇವಿ ದೇವಾಲಯ ಉದ್ಘಾಟಿಸಿದ

ರೈತರ ಪರವಾಗಿ ನಿರಂತರ ಹೋರಾಟ: ಎಚ್‌.ಡಿ.ದೇವೇಗೌಡ

Published:
Updated:
Prajavani

ತಿಪ್ಪಸಂದ್ರ(ಮಾಗಡಿ): ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸಲು ಶಾಸಕ ಎ.ಮಂಜುನಾಥ ಅವರಿಗೆ ಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದರು.

ಸಂಕೀಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಸಾಗರದಲ್ಲಿ ನೂತನ ಮಾರಮ್ಮದೇವಿ ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.

‘ದೇವಾಲಯ ಕಟ್ಟಿಸಿದರೆ ಸಾಲದು, ಸ್ವಚ್ಛತೆ ಕಾಪಾಡಿಕೊಂಡು ನಿತ್ಯ ಪೂಜೆ ಮಾಡಬೇಕು. ನಮ್ಮ ಪೂರ್ವಿಕರು ಗ್ರಾಮದೇವತೆಗಳಲ್ಲಿ ಭಕ್ತಿಯನ್ನಿಟ್ಟುಕೊಂಡು ಸತ್ಯದ ಮಾರ್ಗದಲ್ಲಿ ನಡೆಯುತ್ತಿದ್ದರು. ಇಂದಿಗೂ ರೈತಾಪಿವರ್ಗದವರ ಬೆನ್ನೆಲುಬಾಗಿ ಶಕ್ತಿದೇವತೆಗಳ ಕೃಪೆ ಇದೆ. ನಾನು ಬದುಕಿರುವ ವರೆಗೆ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದರು.

‘1962ರಿಂದ ಕಾವೇರಿ ನದಿ ನೀರನ್ನು ನಮ್ಮ ರಾಜ್ಯದ ರೈತರ ಹೊಲಗಳಿಗೆ ಹರಿಸಲು ಸತತವಾಗಿ ಶ್ರಮಿಸುತ್ತಿದ್ದೇನೆ. 56 ವರ್ಷಗಳಿಂದ ರಾಜಕಾರಣದಲ್ಲಿ ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ಸೋಲು ಗೆಲುವು ಕಂಡಿದ್ದೇನೆ. ಚುನಾವಣೆಯಲ್ಲಿ ಸೋತ ನನ್ನನ್ನು ಪುಣ್ಯಾತ್ಮ ಮತದಾರರು ಮೇಲೆತ್ತಿ ಬೆಳೆಸಿದ್ದಾರೆ’ ಎಂದರು.

‘ರಾಜ್ಯದಲ್ಲಿ ಗಂಗಾಕಲ್ಯಾಣ ಜಾರಿಗೊಳಿಸಿದೆ. ಹಿಂದುಳಿದ ವರ್ಗಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದೇನೆ. ತಾಲ್ಲೂಕಿನ ಎಲ್ಲ ಕೆರೆಗಳಿಗೆ ಹೇಮಾವತಿ ನದಿ ನೀರನ್ನು ತುಂಬಿಸಿ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

ಭೂಗರ್ಭದಲ್ಲಿ ಅಂತರ್ಜಲ ಕಡಿಮೆಯಾಗಿ 1500 ಅಡಿ ಕೊರೆದರು ನೀರು ಸಿಗುತ್ತಿಲ್ಲ .ಆದ್ದರಿಂದ ಯಾವುದೇ ಸರ್ಕಾರವಿರಲಿ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡಬೇಕು. ಎಚ್. ಡಿ .ಕುಮಾರಸ್ವಾಮಿ ಕ್ರಮದಿಂದ ತಾಲ್ಲೂಕಿನ ರೈತರಿಗೆ ₹128 ಕೋಟಿ ಸಾಲ ಮನ್ನಾ ಆಗಿದೆ ಎಂದರು.

ಶಾಸಕ ಎ. ಮಂಜುನಾಥ ಮಾತನಾಡಿ, ‘ದೇವರ ಕರುಣೆಯಿಂದ ನಾವು ಬದುಕಿದ್ದೇವೆ. ತಾಲ್ಲೂಕಿಗೆ ನೀರಾವರಿ ಯೋಜನೆ ಅನುಷ್ಠಾನಗೊಂಡರೆ ರೈತರ ಬಾಳು ಹಸನಾಗಲಿದೆ. ತಿಪ್ಪಸಂದ್ರ ಹೋಬಳಿಯಲ್ಲಿ 25 ವರ್ಷಗಳಿಂದ ರಸ್ತೆಗಳು ಅಭೀವೃದ್ದಿಯಾಗಿರಲಿಲ್ಲ. ನಾನು ಶಾಸಕನಾದ ನಂತರ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದೆ’ ಎಂದರು.

‘ಲೋಕೋಪಯೋಗಿ ಸಚಿವರಾಗಿದ್ದ ಎಚ್. ಡಿ. ರೇವಣ್ಣ ರಸ್ತೆಗಳ ಅಭಿವೃದ್ದಿಗಾಗಿ ₹ 220 ಕೋಟಿ ಅನುದಾನ ನೀಡಿದ್ದಾರೆ. ಬಡವರ ಮಗನನ್ನು ಗುರುತಿಸಿ ಶಾಸಕರನ್ನಾಗಿಸಿದ ದೊಡ್ಡಗೌಡರು ಮತ್ತು ಮತದಾರರ ಋಣ ತೀರಿಸಲು ಅವಿರತವಾಗಿ ದುಡಿಯುತ್ತೇನೆ’ ಎಂದರು.

ಚೈತನ್ಯ ಸಿದ್ದರಾಮೇಶ್ವರ ಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಂ. ರಾಮಣ್ಣ. ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಬಗಿನಗೆರೆ ರಾಮಣ್ಣ. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗಂಗಾಧರ್‌, ಜೆಡಿಎಸ್‌ ಮುಖಂಡರಾದ ಟಿ.ಜಿ. ವೆಂಕಟೇಶ್, ಕಲ್ಕೆರೆ ಶಿವಣ್ಣ, ರಮೇಶ್‌, ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್‌, ಸಂಕೀಘಟ್ಟ ರಮೇಶ್. ತಿಪ್ಪಸಂದ್ರ ರಘು, ಸೂರ್ಯಕುಮಾರ್, ನಿವೃತ್ತ ಶಿಕ್ಷಕ ಎಂ. ರೇವಣ್ಣ. ಶಿಕ್ಷಕ ಚಿಕ್ಕವೀರಯ್ಯ ಮತ್ತು ಗ್ರಾಮಸ್ಥರು ಇದ್ದರು.

ಪ್ರತಿಕ್ರಿಯಿಸಿ (+)