ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷದಿಂದ ಅಪಪ್ರಚಾರ: ಯೋಗೇಶ್ವರ್ ಟೀಕೆ

ಬಿಜೆಪಿಯಿಂದ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರಿಗೆ ಆಹಾರ ವಿತರಣೆ
Last Updated 12 ಮೇ 2021, 4:20 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ದೇಶ ಮತ್ತು ರಾಜ್ಯದಲ್ಲಿ ಕೊರೊನಾ ಸೋಂಕು ಇಷ್ಟು ದೊಡ್ಡದಾಗಿ ಹರಡಲು ವಿರೋಧ ಪಕ್ಷದವರ ಅಪಪ್ರಚಾರವೇ ಕಾರಣ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಆರೋಪಿಸಿದರು.

ಪಟ್ಟಣದಲ್ಲಿ ಬಿಜೆಪಿಯಿಂದ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರಿಗೆ ಆಹಾರ ವಿತರಣೆ ಮಾಡುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವಿರೋಧ ಪಕ್ಷದವರು ಕೇಂದ್ರ, ರಾಜ್ಯ ಸರ್ಕಾರ, ಪ್ರಧಾನ ಮಂತ್ರಿ, ಮುಖ್ಯಮಂತ್ರಿಯನ್ನು ಸಹ ಭ್ರಷ್ಟಾಚಾರಿಗಳು ಎನ್ನುವ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಬಿಜೆಪಿ ಬಗ್ಗೆ ಯಾವುದೇ ರೀತಿಯ ಅಪಪ್ರಚಾರ ಇರಲಿಲ್ಲ. ಆದರೆ, ಕೊರೊನಾ ವಿಚಾರವಾಗಿ ಕೆಲವರು ಅಪಪ್ರಚಾರ ಮಾಡಿಕೊಂಡು ರಾಜಕೀಯವಾಗಿ ಲಾಭ ಪಡೆಯುತ್ತಿದ್ದಾರೆ. ಕೆಲವರು ಲಾಕ್‌ಡೌನ್ ಬಗ್ಗೆ ಮಾತನಾಡುತ್ತಾರೆ. ಇನ್ನು ಕೆಲವರು ಲಸಿಕೆಯ ವಿಚಾರವಾಗಿಯೇ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

‘ಕೊರೊನಾ ವಿಚಾರವಾಗಿ ಇಷ್ಟೆಲ್ಲ ಅವಾಂತರಕ್ಕೆ ರಾಜಕೀಯ ವಿರೋಧಿಗಳೇ ಕಾರಣ. ರಾಜಕೀಯ ಲಾಭಕ್ಕಾಗಿ ಹಲವಾರು ರೀತಿಯಲ್ಲಿ ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ನಾನು ಹೇಳಿದ ರೀತಿ ಲಾಕ್‌ಡೌನ್ ಮಾಡುತ್ತಿಲ್ಲ ಎನ್ನುತ್ತಾರೆ. ಸಿದ್ದರಾಮಯ್ಯ ಲಾಕ್‌ಡೌನ್ ನಿಯಮಗಳ ಬಗ್ಗೆ ಮಾತನಾಡುತ್ತಾರೆ. ಯಾರದ್ದೋ ಹೇಳಿಕೆ ಮೇಲೆ ನಾವು ಸರ್ಕಾರ ನಡೆಸಲು ಆಗುವುದಿಲ್ಲ. ನಾವು ತಜ್ಞರು, ನುರಿತ ವೈದ್ಯರ ಸಲಹೆ ಮೇರೆಗೆ ಲಾಕ್‌ಡೌನ್ ಮಾಡಿದ್ದೇವೆ’ ಎಂದು ಹೇಳಿದರು.

ರೋಗ ಹರಡದಂತೆ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಲಾಠಿ ಬೀಸಬೇಡಿ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ, ಪೊಲೀಸರಿಗೂ ಸಹನೆ ಕೆಡುತ್ತದೆ. ಸಾರ್ವಜನಿಕರೇ ಸ್ವಯಂಪ್ರೇರಿತವಾಗಿ ಲಾಕ್‌ಡೌನ್ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ.ಜಯರಾಮು, ಚನ್ನಪಟ್ಟಣ ಪ್ರಾಧಿಕಾರ ಅಧ್ಯಕ್ಷ ಮಲವೇಗೌಡ, ಮುಖಂಡ ರಾಮಚಂದ್ರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT