ಭಾನುವಾರ, ನವೆಂಬರ್ 17, 2019
23 °C

‘ತೇಜಸ್ವಿ ಸಾಹಿತ್ಯ ಕ್ಷೇತ್ರದ ಸವ್ಯಸಾಚಿ’

Published:
Updated:
Prajavani

ಚನ್ನಪಟ್ಟಣ: ಸಾಹಿತ್ಯ ಕ್ಷೇತ್ರದ ಸವ್ಯಸಾಚಿ ಪೂರ್ಣಚಂದ್ರ ತೇಜಸ್ವಿ ಎಂದು ವಿಶ್ವೇಶ್ವರಯ್ಯ ಐಟಿಐ ಕಾಲೇಜು ಪ್ರಾಂಶುಪಾಲ ಟಿ.ಎಂ.ಕೆಂಚೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ತಾಲೂಕು ಕಸಾಪ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಜಯಂತಿ ಹಾಗೂ ಗೀತಗಾಯನ ಉದ್ಘಾಟಿಸಿ ಮಾತನಾಡಿದರು.

ತೇಜಸ್ವಿ ಕೃತಿಗಳು ಶತಶತಮಾನ ಉರುಳಿದರೂ ಅಳಿಯದೆ ಉಳಿಯುವ ಸಾಹಿತ್ಯವಾಗಿದೆ. ಹಲವು ಕೃತಿಗಳು ಧಾರಾವಾಹಿ, ಚಲನಚಿತ್ರಗಳಾಗಿ ಹಲವು ಪ್ರಶಸ್ತಿಗಳನ್ನು ಪಡೆದಿವೆ. ಸರಳತೆ ಮೈಗೂಡಿಸಿಕೊಂಡಿದ್ದ ತೇಜಸ್ವಿ ತಮ್ಮ ಬರಹಗಳಂತೆ ಬದುಕಿದ ವ್ಯಕ್ತಿ ಎಂದು ಅಭಿಪ್ರಾಯಪಟ್ಟರು.

ಕಸಾಪ ತಾಲ್ಲೂಕು ಅಧ್ಯಕ್ಷ ಮತ್ತೀಕೆರೆ ಬಿ.ಚಲುವರಾಜು ಮಾತನಾಡಿ, ತೇಜಸ್ವಿ ಕನ್ನಡ ಸಾಹಿತ್ಯಲೋಕದ ಜೀವಂತ ಕವಿ. ಸಾಹಿತ್ಯ ಅಲ್ಲದೆ ಸಾಹಿತ್ಯೇತರ ಚಟುವಟಿಕೆಯಲ್ಲಿ ಹೆಸರು ಮಾಡಿದ ಅಪರೂಪದ ವ್ಯಕ್ತಿ.  ಅವರ ಕೃತಿಗಳು ಸಿನಿಮಾ, ನಾಟಕಗಳಾಗಿ ಜನರ ಮನಸೂರೆಗೊಂಡಿವೆ. ಪ್ರಕೃತಿಯನ್ನು ಅತಿಹೆಚ್ಚಾಗಿ ಪ್ರೀತಿಸಿ, ಛಾಯಾಚಿತ್ರ ತೆಗೆಯುವುದರಲ್ಲಿ ಪ್ರಾವೀಣ್ಯ ಗಳಿಸಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಚುಟುಕು ಕವಿ ಎಂ.ಟಿ.ನಾಗರಾಜು ಮಾತನಾಡಿ, ಕನ್ನಡದ ಮಹಾನ್ ಕವಿ ಕುವೆಂಪು ಅವರು ನಡೆದ ದಾರಿಯಲ್ಲಿ ತೇಜಸ್ವಿ ವಿನೂತನವಾಗಿ ಗುರುತಿಸಿಕೊಂಡು ಪ್ರಕೃತಿಯ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳನ್ನು ಪ್ರೀತಿಸಿದರು. ವೈಚಾರಿಕವಾಗಿ, ಸರಳವಾಗಿ ಸಾಹಿತ್ಯ ರಚಿಸಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಕಸಾಪ ಕಾರ್ಯದರ್ಶಿಗಳಾದ ಮಂಜೇಶ್ ಬಾಬು, ಶ್ರೀನಿವಾಸ ರಾಂಪುರ, ಪದಾಧಿಕಾರಿಗಳಾದ ಸಿ.ಕೆ.ಹರೀಶ್, ಮಂಜುನಾಥ್, ಗೋಪಿ ಇದ್ದರು.

ಪ್ರತಿಕ್ರಿಯಿಸಿ (+)