ಬುಧವಾರ, ಮಾರ್ಚ್ 29, 2023
33 °C

ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ: ಎಚ್.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಅದಕ್ಕಾಗಿ ಶ್ರಮಿಸುತ್ತಿದ್ದೇನೆ’ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನಾನು ಶಾಸಕನಾದ ಈ ಮೂರು ವರ್ಷದಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಮತ್ತು ಕಳೆದ 20 ವರ್ಷಗಳಿಂದ ಆಗಿದ್ದ ಅಭಿವೃದ್ಧಿಯನ್ನು ನೋಡಿ ಮಾತನಾಡಬೇಕು. ಸುಖಾಸುಮ್ಮನೆ ಟೀಕೆ ಮಾಡುವವರಿಗೆ ನಾನು ಸೊಪ್ಪು ಹಾಕುವುದಿಲ್ಲ’ ಎಂದು ಖಾರವಾಗಿ ನುಡಿದರು.

‘ಕ್ಷೇತ್ರದ ಅಭಿವೃದ್ಧಿ ಕುರಿತು ಟೀಕೆ ಮಾಡುವವರಿಗೆ ಸಿಂಧಗಿಗೆ ನಾನೇ ಬಸ್ ಮಾಡಿಕೊಡುತ್ತೇನೆ. ಅಲ್ಲಿನ ಜನರು ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ಅವರು ನೋಡಿಕೊಂಡು ಬಂದು ನಂತರ ಮಾತನಾಡಲಿ. ಅಲ್ಲಿನ ಜನರ ಬದುಕು ಮತ್ತು ಬವಣೆ ನೋಡಿ. ನಾವು ಇಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ. ನಿಮಗೆ ಎಲ್ಲವೂ ಅರ್ಥವಾಗುತ್ತದೆ’ ಎಂದು ಸವಾಲು ಹಾಕಿದರು.

‘ಕಳೆದ ಅವಧಿಯಲ್ಲಿ ಪ್ರತಿ ಕಾಮಗಾರಿಗೂ ಪೇಮೆಂಟ್ ಹೋಗಬೇಕಿತ್ತು. ಪೇಮೆಂಟ್ ಇಲ್ಲದಿದ್ದರೆ ಅಂದಿನ ಶಾಸಕರು ಗುದ್ದಲಿ ಕೂಡ ಹಿಡಿಯುತ್ತಿರಲಿಲ್ಲ. ಈಗಿರುವ ಎಂಜಿನಿಯರ್, ಗುತ್ತಿಗೆದಾರರಿಗೆ ಗುಣಾತ್ಮಕ ಕೆಲಸ ಮಾಡಿ ಜನರಿಗೆ ಅನುಕೂಲ ಕಲ್ಪಿಸಿ ಕೊಡಿ, ನನಗೆ ಯಾವುದೇ ಅಪೇಕ್ಷೆ ಇಲ್ಲ ಎಂದು ನಾನು ತಿಳಿಸಿದ್ದೇನೆ. ಬೇಕಿದ್ದರೆ ಈ ಕುರಿತು ಗುತ್ತಿಗೆದಾರರನ್ನು ಕೇಳಿ ನೋಡಿ’ ಎಂದು ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

ಯಾವುದೇ ಕಾರ್ಯಕ್ರಮ ಮಾಡಿದರೂ ಪ್ರೋಟೋಕಾಲ್ ಎಂದು ಅಧಿಕಾರಿಗಳು ಹೇಳುತ್ತಾರೆ. ಒಂದು ಕಟ್ಟಡ ಕಾಮಗಾರಿ ವೀಕ್ಷಿಸಲು ಬಂದರೂ ಪ್ರೋಟೋಕಾಲ್ ಎನ್ನುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಜನಪ್ರತಿನಿಧಿಗಳಿಗೆ ಹೇಳಬೇಕು ಅನ್ನುತ್ತಾರೆ. ಇಲ್ಲಿ ಕೆಲಸ ಮಾಡೋಕೆ ಕುಮಾರಸ್ವಾಮಿ ಬೇಕು. ಬೇರೆ ವಿಷಯಕ್ಕೆ ಪ್ರೋಟೋಕಾಲ್ ಬೇಕೇ ಎಂದು ಪ್ರಶ್ನಿಸಿದರು. 

₹ 2 ಕೋಟಿ ವೆಚ್ಚದಲ್ಲಿ ಕಾಮಗಾರಿ: ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಅರಳಾಳುಸಂದ್ರ ಗ್ರಾಮದಲ್ಲಿ ₹ 2 ಕೋಟಿ ವೆಚ್ಚದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಸುಮಾರು 10 ನೂತನ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಗರದ ಪಾಲಿಟೆಕ್ನಿಕ್‌ಗೆ ಕಾಯಕಲ್ಪ ನೀಡುವ ಜತೆಗೆ ಹೊಸ ಕಟ್ಟಡ ನಿರ್ಮಿಸಲು ₹ 19.5 ಕೋಟಿ ಅನುದಾನವ ನೀಡಿದ್ದೆ. ಆದರೆ ನಂತರ ಬಂದ ಸರ್ಕಾರ ಆ ಅನುದಾನವನ್ನು ಹಿಂದಕ್ಕೆ ಪಡೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡರಾದ ಅರಳಾಳುಸಂದ್ರ ಶಿವಪ್ಪ, ಬೋರ್ವೆಲ್ ರಾಮಚಂದ್ರು, ಚಿನ್ನಗಿರೀಗೌಡ, ರೇಖಾ ಉಮಾಶಂಕರ್, ಅರಳಾಳುಸಂದ್ರ ಜಗದೀಶ್, ರೈತ ಸಂಘದ ಮುಖಂಡರಾದ ಅನುಸೂಯಮ್ಮ, ಸುಜೀವನ್ ಕುಮಾರ್, ತಹಶೀಲ್ದಾರ್ ನಾಗೇಶ್, ಪೌರಾಯುಕ್ತ ಶಿವನಂಕಾರಿಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು