ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದ ಮದವಿಲ್ಲ; ನಿಮ್ಮ ಋಣ ಮರೆಯಲ್ಲ: ಡಿ. ಕೆ. ಶಿವಕುಮಾರ್

Published 3 ಜೂನ್ 2023, 15:45 IST
Last Updated 3 ಜೂನ್ 2023, 15:45 IST
ಅಕ್ಷರ ಗಾತ್ರ

ರಾಮನಗರ (ಕನಕಪುರ): ‘ಚಿಕ್ಕ ವಯಸ್ಸಿನಲ್ಲೇ ಅಧಿಕಾರ ಕಂಡಿರುವ ನನಗೆ ಅಧಿಕಾರದ ಮದವಿಲ್ಲ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿರುವ ನಿಮ್ಮನ್ನು ಮರೆಯುವುದಿಲ್ಲ. ನೀವು ಕೊಟ್ಟ ಈ ಅಧಿಕಾರದಿಂದ ನಿಮ್ಮ ಸೇವೆ ಮಾಡಿ ಋಣ ತೀರಿಸುವೆ...’

– ಉಪ ಮುಖ್ಯಮಂತ್ರಿ ಹುದ್ದೆಗೇರಿದ ಬಳಿಕ ಮೊದಲ ಸಲ ಸ್ವ ಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಕಲ್ಲಹಳ್ಳಿಯಲ್ಲಿ ಮತದಾರರು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಆಡಿದ ಮಾತುಗಳಿವು.

‘ಚುನಾವಣೆಯಲ್ಲಿ ನನಗೆ ನೀವು ಐತಿಹಾಸಿಕ ಗೆಲುವನ್ನಷ್ಟೇ ಕೊಟ್ಟಿಲ್ಲ. ಇಡೀ ರಾಜ್ಯ, ದೇಶ ಹಾಗೂ ರಾಜಕೀಯ ಪಕ್ಷಗಳಿಗೂ ಸಂದೇಶ ಕೊಟ್ಟಿದ್ದೀರಿ. ಅದಕ್ಕಾಗಿ, ಕ್ಷೇತ್ರದ ಮಹಾಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಈ ಚುನಾವಣೆಯಲ್ಲಿ ನಾನು ಹೆಚ್ಚು ಪ್ರಚಾರ ಮಾಡದಿದ್ದರೂ, ನಿಮಗೆ ನೀವೇ ಅಭ್ಯರ್ಥಿಯಾಗಿ ಕೆಲಸ ಮಾಡಿದ್ದೀರಿ. ನನ್ನನ್ನು ನಿಮ್ಮ ಮನೆಯ ಮಗ ಹಾಗೂ ಸೋದರನಂತೆ ಹರಸಿ ಬೆಳೆಸಿದ್ದೀರಿ’ ಎಂದು ನೆನೆದರು.

‘ನೀವು ನನಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಬಂದರೂ, ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ನಾನೇ ನಿಮ್ಮನ್ನು ಭೇಟಿ ಮಾಡಿ ಕೃತಜ್ಞತೆ ತಿಳಿಸಲು ಬಂದಿದ್ದೇನೆ. ಡಿಸಿಎಂ ಆದರೂ ನಿಮ್ಮಲ್ಲಿ ಒಬ್ಬನಾಗಿ, ಸಾಮಾನ್ಯ ಕಾರ್ಯಕರ್ತನಂತೆ ಇಲ್ಲಿಗೆ ಬಂದಿದ್ದೇನೆ’ ಎಂದಾಗ ಕಾರ್ಯಕರ್ತರು ಜೋರಾಗಿ ಕೂಗಿದರು.

‘ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ. ನಿಮ್ಮನ್ನು ಭೇಟಿ ಮಾಡಿ, ನನ್ನ ಕೈಲಾದ ಸಹಾಯ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ದ್ವೇಷದ ಚಟ ಇಲ್ಲ: ‘ನಿಮ್ಮ ತೀರ್ಪನ್ನು ಸ್ವೀಕರಿಸುವ ಸಹನೆ ವಿರೋಧ ಪಕ್ಷದವರಿಗೆ ಇಲ್ಲವಾಗಿದೆ. ಆ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ. ರಾಜ್ಯದ ಜನರ ಸೇವೆಗೆ ಅವಕಾಶ ಸಿಕ್ಕಿರುವ ಈ ಸಂದರ್ಭದಲ್ಲಿ ಬೇರೆಯವರ ಬಗ್ಗೆ ಟೀಕೆ ಮಾಡಿ, ದ್ವೇಷ ರಾಜಕಾರಣ ಮಾಡುವ ಚಟ ನನಗಿಲ್ಲ’ ಎಂದರು.

ಕ್ಷೇತ್ರದ ಹಾರೋಹಳ್ಳಿ, ಕಲ್ಲಹಳ್ಳಿ, ಶಿವನಹಳ್ಳಿ, ಸಾತನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿ, ಕನಕಪುರ ಪಟ್ಟಣದಲ್ಲಿ ಶಿವಕುಮಾರ್ ದಿನವಿಡೀ ಸಂಚರಿಸಿ ಮತದಾರರು ಹಾಗೂ ಮುಖಂಡರನ್ನು ಭೇಟಿಯಾದರು. ತಮ್ಮ ಬೆಳವಣಿಗೆಗೆ ಕ್ಷೇತ್ರದ ಮುಖಂಡರು ಹಾಗೂ ಮತದಾರರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ತಡರಾತ್ರಿ ಬೆಂಗಳೂರಿಗೆ ತೆರಳಿದರು.

ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಕೆಲ ಅಧಿಕಾರಿಗಳು ಸಹ ಶಿವಕುಮಾರ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ರಾಮನಗರ ಶಾಸಕ ಇಕ್ಬಾಲ್ ಶರೀಫ್, ವಿಧಾನ ಪರಿಷತ್ ಸದಸ್ಯ ರವಿ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.

ಡಿಕೆಶಿ ಮಾತುಗಳು

* ಕ್ಷೇತ್ರದ ಜನರು ತಮ್ಮ ಆಸ್ತಿ ಮಾರಿಕೊಳ್ಳಬಾರದು. ನಿಮ್ಮ ಜೇಬಿಗೆ ಹಣ ಹಾಕಲು ನನಗೆ ಸಾಧ್ಯವಿಲ್ಲ. ಆದರೆ, ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡುತ್ತೇನೆ.

* ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಜೂಜು ಸೇರಿದಂತೆ ಯಾವುದೇ ಅಪರಾಧ ಚಟುವಟಿಕೆಯ ದೂರು ನನಗೆ ಬರಬಾರದು. ಕ್ಷೇತ್ರದಲ್ಲಿ ಏನೇ ಆದರೂ, ಅದು ನನ್ನ ಮೇಲೆ ಪರಿಣಾಮ ಬೀರುತ್ತದೆ.

* ಕಬ್ಬಾಳಮ್ಮ ದೇವಾಲಯ ಜೀರ್ಣೋದ್ಧಾರಕ್ಕೆ ಮುಂದಾದಾಗ ಹಲವರು ಎಚ್ಚರಿಕೆ ನೀಡಿದರು. ಆದರೂ, ಮುಂದುವರಿದ ನನಗೆ ದೇವಿಯ ಆಶೀರ್ವಾದ ಸಿಕ್ಕಿತು. 

* ನಮ್ಮ ಗ್ಯಾರಂಟಿ ಯೋಜನೆ ಸೌಲಭ್ಯ ಪಡೆಯಲು ಯಾರಾದರೂ ಲಂಚ ಕೇಳಿದರೆ, ನೇರವಾಗಿ ನನಗೆ ದೂರು ಕೊಡಿ. ವಿಧಾನಸೌಧದ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ. ಅವರನ್ನು ಒದ್ದು ಒಳಗೆ ಹಾಕಿಸುತ್ತೇನೆ.

* ಜೂನ್ 11ರಿಂದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣವಿದೆ. ಆದರೆ, ಗಂಡಸರು ಟಿಕೆಟ್ ತೆಗೆದುಕೊಂಡು ಪ್ರಯಾಣಿಸಬೇಕು. ನಮ್ಮ ಕೆೆಎಸ್‌ಆರ್‌ಟಿಸಿ ಉಳಿಯಬೇಕಲ್ವ.

‘ವೈದ್ಯಕೀಯ ಕಾಲೇಜಿಗೆ ಮೊದಲ ಆದ್ಯತೆ’

‘ಕನಕಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಿದ್ದೇನೆ. ಮೊದಲ ಆದ್ಯತೆಯಾಗಿ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ತರುವೆ. ಈ ಕುರಿತು ಮುಖ್ಯಮಂತ್ರಿಗೆ ಈಗಾಗಲೇ ಪ್ರಸ್ತಾವ ಸಲ್ಲಿಸಿರುವೆ’ ಎಂದು ಶಿವಕುಮಾರ್ ಹೇಳಿದರು.

‘ಹಿಂದೆ ಕ್ಷೇತ್ರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ಕೊಟ್ಟರು’ ಎಂದು ನೆನೆದ ಅವರು ‘ನನ್ನ ಜನರಿಗೆ ಕಾಲೇಜು ಕೊಟ್ಟರೆ ಬೆಂಗಳೂರಿಗೆ ವಲಸೆ ಹೋಗುವುದು ತಪ್ಪಲಿದೆ. ಈ ಕೆಲಸವನ್ನು ಆದ್ಯತೆ ಮೇರೆಗೆ ಮಾಡುವೆ’ ಎಂದು ಭರವಸೆ ನೀಡಿದರು.

ಬಿಜೆಪಿ ಜೆಡಿಎಸ್ ವಿರುದ್ಧ ವಾಗ್ದಾಳಿ ‘ನಾವು ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯ ಅಶೋಕಣ್ಣ ಬೊಮ್ಮಾಯಿ ಜೆಡಿಎಸ್‌ನ ಕುಮಾರಸ್ವಾಮಿ ಕೊಟ್ಟಿದ್ದರಾ? ಅವರದ್ದು ಕೇವಲ ಖಾಲಿ ಮಾತು. ಬಿಜೆಪಿ ಅವರು ತಮ್ಮ ಸೋಲಿನ ಬಗ್ಗೆ ಚರ್ಚೆ ಮಾಡುವುದಕ್ಕಿಂತ ನಮ್ಮ ಯೋಜನೆ ಬಗ್ಗೆಯೇ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ’ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.

‘ವಿದೇಶಗಳಲ್ಲಿರುವ ಕಪ್ಪುಹಣ ತಂದು ದೇಶದ ಜನರ ಖಾತೆಗೆ ತಲಾ ₹15 ಲಕ್ಷ ಹಾಕುತ್ತೇವೆ ಎಂದವರು ಯಾಕೆ ಹಾಕಿಲ್ಲ? ರೈತರ ಆದಾಯ ದ್ವಿಗುಣ ಹಾಗೂ ಬೆಲೆ ಇಳಿಕೆ ಮಾಡುತ್ತೇವೆ ಎಂದವರು ಯಾಕೆ ಏನೂ ಮಾಡಲಿಲ್ಲ ಎಂದು ನೀವು ಬಿಜೆಪಿಯವರನ್ನು ಕೇಳಬೇಕು’ ಎಂದು ಕರೆ ನೀಡಿದರು.

ಹಾರದ ಸೇಬು ಕಿತ್ತು ತಿಂದ ಡಿಸಿಎಂ ಕಲ್ಲಹಳ್ಳಿಯಲ್ಲಿ ತೆರೆದ ವಾಹನದಲ್ಲಿ ನಡೆದ ಮೆರವಣಿಗೆ ಸಂದರ್ಭದಲ್ಲಿ ಕಾರ್ಯಕರ್ತರು ಕ್ರೇನ್‌ ಬಳಸಿ ಸೇಬಿನ ಬೃಹತ್ ಹಾರ ಹಾಕಿದರು. ಆಗ ಡಿ.ಕೆ. ಶಿವಕುಮಾರ್ ಹಾರದಲ್ಲಿದ್ದ ಸೇಬೊಂದನ್ನು ಕಿತ್ತುಕೊಂಡು ತಿಂದರು.

ವಾಹನದಿಂದ ಅವರು ಕೆಳಗಿಳಿಯುತ್ತಿದ್ದಂತೆ ಕಾರ್ಯಕರ್ತರು ಹಾರದಲ್ಲಿದ್ದ ಸೇಬುಗಳನ್ನು ಕಿತ್ತುಕೊಂಡರು. ತಕ್ಷಣ ಕ್ರೇನ್ ಚಾಲಕ ಹಾರವನ್ನು ಮೇಲಕ್ಕೆತ್ತಿ ಪಕ್ಕಕ್ಕೆ ಕ್ರೇನ್ ಚಲಾಯಿಸಿದ. ಕೆಲ ಹೊತ್ತಿನ ಬಳಿಕ ಹಾರ ಕೆಳಕ್ಕಿಳಿಸಿದಾಗ ಮತ್ತಷ್ಟು ಮಂದಿ ಸೇಬಿಗಾಗಿ ಮುಗಿ ಬಿದ್ದರು.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸೇಬಿನ ಬೃಹತ್ ಹಾರ ಹಾಕಿ ಸ್ವಾಗತಿಸಿದರು
– ಪ್ರಜಾವಾಣಿ ಚಿತ್ರ
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸೇಬಿನ ಬೃಹತ್ ಹಾರ ಹಾಕಿ ಸ್ವಾಗತಿಸಿದರು – ಪ್ರಜಾವಾಣಿ ಚಿತ್ರ
ಕನಕಪುರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಎಸ್. ಕರಿಯಪ್ಪ ಅವರ ಸಮಾಧಿಗೆ ಡಿ.ಕೆ. ಶಿವಕುಮಾರ್ ಶನಿವಾರ ಪುಷ್ಪ ನಮನ ಸಲ್ಲಿಸಿದರು
ಕನಕಪುರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಎಸ್. ಕರಿಯಪ್ಪ ಅವರ ಸಮಾಧಿಗೆ ಡಿ.ಕೆ. ಶಿವಕುಮಾರ್ ಶನಿವಾರ ಪುಷ್ಪ ನಮನ ಸಲ್ಲಿಸಿದರು
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು
ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT