ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಇಂದು ಮದ್ಯ ಮಾರಾಟ ಆರಂಭ

ಜಿಲ್ಲೆಯಲ್ಲಿನ ಅಂಗಡಿಗಳಲ್ಲಿ ಸಿದ್ಧತೆ; ಅಂತರ ಕಾಯ್ದುಕೊಳ್ಳಲು ಸೂಚನೆ
Last Updated 4 ಮೇ 2020, 10:42 IST
ಅಕ್ಷರ ಗಾತ್ರ

ರಾಮನಗರ: ಮದ್ಯಪ್ರಿಯರ ಚಡಪಡಿಕೆಗೆ ಕೊನೆಗೂ ಮುಕ್ತಿ ದೊರೆತಿದೆ. ಸೋಮವಾರದಿಂದ ರಾಮನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಆರಂಭವಾಗಲಿದೆ.

ಜಿಲ್ಲೆಯಲ್ಲಿ ಸುಮಾರು 180ಕ್ಕೂ ಹೆಚ್ಚು ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ವೈನ್‌ ಶಾಪ್‌ಗಳಿವೆ. ಈ ಪೈಕಿ ವೈನ್‌ಶಾಪ್‌, ಎಂಎಸ್‌ಐಎಲ್‌ ಮಳಿಗೆಗಳು, ಎಂಆರ್‌ಪಿ ಸ್ಟೋರ್‌ಗಳು ಮಾತ್ರ ಬಾಗಿಲು ತೆರೆಯಲಿವೆ. ಬಾರ್ ಮತ್ತು ರೆಸ್ಟೋರೆಂಟ್‌ಗೆ ಅನುಮತಿ ಸಿಕ್ಕಿಲ್ಲ. ಅಂಗಡಿ ಬಳಿಯಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಇಲ್ಲ. ಕೇವಲ ಪಾರ್ಸಲ್‌ ಕೊಂಡೊಯ್ಯಲು ಮಾತ್ರ ವ್ಯವಸ್ಥೆ ಇರಲಿದೆ.

ಅಂತರದ ಪಾಠ

ಭಾನುವಾರದಿಂದಲೇ ಮದ್ಯದಂಗಡಿಗಳ ಮುಂದೆ ಸಿದ್ಧತೆ ನಡೆದಿತ್ತು. ಬ್ಯಾರಿಕೇಡ್‌ಗಳನ್ನು ಹಾಕಿ, ತಾತ್ಕಾಲಿಕವಾಗಿ ಕಂಬಿಗಳನ್ನು ನಿರ್ಮಿಸಲಾಗುತಿತ್ತು. ಏಕಕಾಲಕ್ಕೆ ಐದು ಮಂದಿಗೆ ಮಾತ್ರ ಅಂಗಡಿ ಒಳಗೆ ಪ್ರವೇಶ ಸಿಗಲಿದೆ. ಪ್ರತಿ ವ್ಯಕ್ತಿಯು ಕನಿಷ್ಠ6ಅಡಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.

ಬೆಳಗ್ಗೆ ಏನು?

ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ಅಬಕಾರಿ ಇಲಾಖೆ ಅಧಿಕಾರಿಗಳು ಪ್ರತಿ ಅಂಗಡಿಗೆ ತೆರಳಿ ಸಂಗ್ರಹದಲ್ಲಿ ಇರುವ ಮದ್ಯದ ವಿವರ ಪಡೆದಿದ್ದರು. ನಂತರ ಅಂಗಡಿಗಳ ಬಾಗಿಲಿಗೆ ಸೀಲ್‌ ಹಾಕಿದ್ದರು. ಸೋಮವಾರ ವಹಿವಾಟು ಆರಂಭಕ್ಕೆ ಮುನ್ನ ಅಧಿಕಾರಿಗಳು ಎಲ್ಲ ಅಂಗಡಿಗಳಿಗೆ ತೆರಳಿ ಸಂಗ್ರಹದಲ್ಲಿ ಇರುವ ದಾಸ್ತಾನು ಹಾಗೂ ಈ ಹಿಂದೆ ಸಂಗ್ರಹದಲ್ಲಿ ಇದ್ದ ದಾಸ್ತಾನಿನ ವಿವರವನ್ನು ತಾಳೆ ಹಾಕಬೇಕು. ನಂತರವಷ್ಟೇ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕಿದೆ.

ಅಕ್ರಮದ ವಾಸನೆ

ಮದ್ಯ ಮಾರಾಟ ನಿಷೇಧಗೊಂಡ ದಿನದಿಂದ ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಪ್ರಮಾಣ ಹೆಚ್ಚುತ್ತಲೇ ಇದೆ. ಮದ್ಯದ ಎಂಆರ್‌ಪಿ ಮೌಲ್ಯದ ನಾಲ್ಕು ಪಟ್ಟು ದರಕ್ಕೆ ಮಾರಿ ಹಣ ಸಂಪಾದನೆ ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳೇ ಈ ಅವಧಿಯಲ್ಲಿ 550ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದು, ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಿದ್ದರು. ಇದಲ್ಲದೆ ದಾಸ್ತಾನು ವ್ಯತ್ಯಾಸ ಕಂಡುಬಂದ ನಾಲ್ಕು ಮದ್ಯದಂಗಡಿಗಳ ಪರವಾನಗಿ ರದ್ದುಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT