ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು–ಮೈಸೂರು ರೈಲು ಸಂಚಾರ 2 ತಾಸು ವಿಳಂಬ

ಹೆಜ್ಜಾಲ–ಕೆಂಗೇರಿ ನಡುವಣ ಲೆವೆಲ್ ಕ್ರಾಸಿಂಗ್‌–15ರಲ್ಲಿ ಸುರಕ್ಷತಾ ಕಾಮಗಾರಿ: ಪ್ರಯಾಣಿಕರ ಪರದಾಟ
Published 10 ಜುಲೈ 2024, 15:28 IST
Last Updated 10 ಜುಲೈ 2024, 15:28 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಹೆಜ್ಜಾಲ –ಕೆಂಗೇರಿ ನಡುವಣ ಲೆವೆಲ್ ಕ್ರಾಸಿಂಗ್–15ರಲ್ಲಿ ಎಂಜಿನಿಯರಿಂಗ್ ಮತ್ತು ಸುರಕ್ಷತಾ ಕಾಮಗಾರಿ ಕಾರಣದಿಂದಾಗಿ ಬೆಂಗಳೂರು ಮತ್ತು ಮೈಸೂರು ಮಾರ್ಗದ ಏಳೆಂಟು ರೈಲುಗಳು ಬುಧವಾರ ಬೆಳಿಗ್ಗೆ ಸುಮಾರು ಎರಡು ತಾಸು ವಿಳಂಬವಾಗಿ ಸಂಚರಿಸಿದವು.

ಸಮೀಪದ ನಿಲ್ದಾಣಗಳಲ್ಲೇ ಬೀಡುಬಿಟ್ಟ ರೈಲುಗಳಿಂದಾಗಿ ಪ್ರಯಾಣಿಕರು ಸರಿಯಾದ ಸಮಯಕ್ಕೆ ತಲುಪಲಾಗದೆ ಪರದಾಡಬೇಕಾಯಿತು. ತಮ್ಮ ಕೆಲಸಗಳಿಗೆ ಹೋಗಲು ತಡವಾಗಿದ್ದರಿಂದ ಹಲವರು ಬಸ್‌ ಸೇರಿದಂತೆ ಇತರ ವಾಹನಗಳನ್ನು ಆಶ್ರಯಿಸಬೇಕಾಯಿತು.

ಬೆಳಿಗ್ಗೆ 7.30ರಿಂದ 9.30 ಗಂಟೆವರೆಗೆ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು. ರೈಲುಗಳು ಚನ್ನಪಟ್ಟಣ, ರಾಮನಗರ ಹಾಗೂ ಬಿಡದಿ ನಿಲ್ದಾಣದಲ್ಲೇ ನಿಂತವು. ಇನ್ನೇನು ರೈಲು ಹೊರಡಲಿದೆ ಎಂದುಕೊಂಡ ಪ್ರಯಾಣಿಕರು ಕಾದು ಹೈರಾಣಾದರು.

‘ಹೆಜ್ಜಾಲ–ಕೆಂಗೇರಿ ನಡುವಣ ಲೆವೆಲ್ ಕ್ರಾಸಿಂಗ್–15ರಲ್ಲಿ ಮಂಗಳವಾರ ರಾತ್ರಿಯಿಂದಲೇ ಪವರ್ ಬ್ಲಾಕ್ ಮತ್ತು ಲೈನ್ ಬ್ಲಾಕ್ ಕೆಲಸ ಆರಂಭಿಸಲಾಗಿತ್ತು. ಸಿಮೆಂಟ್ ಬ್ಲಾಕ್‌ಗಳ ಅಳವಡಿಕೆ ಸೇರಿದಂತೆ ಕೆಲ ಕೆಲಸಗಳು ಬೆಳಿಗ್ಗೆ 7ರ ಹೊತ್ತಿಗೆ ಮುಗಿಯಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಕೆಲಸ ವಿಳಂಬವಾಯಿತು. ಹಾಗಾಗಿ, ಬೆಂಗಳೂರು ಮತ್ತು ಮೈಸೂರಿಗೆ ತೆರಳಬೇಕಿದ್ದ ಏಳೆಂಟು ರೈಲುಗಳ ಸಂಚಾರ ವಿಳಂಬವಾಯಿತು’ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿ ಅವಧಿಯಲ್ಲಿ ಬೆಂಗಳೂರು ಮತ್ತು ಮೈಸೂರು ಮಾರ್ಗದ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಕಾಮಗಾರಿ ವಿಳಂಬವಾಗಿದ್ದರಿಂದ ಬೆಳಿಗ್ಗೆ ಸಂಚರಿಸುವ ರೈಲುಗಳಿಗೆ ತೊಂದರೆಯಾಯಿತು. ಕಾಮಗಾರಿ ಮುಗಿಯುವವರೆಗೆ ರೈಲುಗಳು ನಿಲ್ದಾಣದಲ್ಲೇ ಬೀಡು ಬಿಟ್ಟಿದ್ದವು. ಸುಮಾರು 9.30ರ ಸುಮಾರಿಗೆ ಕೆಲಸ ಮುಗಿದ ಬಳಿಕ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT