ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ದಾಳಿಗೆ ಬಲಿಯಾದ ಪೊಲೀಸ್‌ ಕನಸು

ನಾರಾಯಣಪುರದಲ್ಲಿ ಯುವಕ ಚೇತನ್‌ ಕುಮಾರ್‌ ಸಾವು
Last Updated 25 ಡಿಸೆಂಬರ್ 2019, 16:18 IST
ಅಕ್ಷರ ಗಾತ್ರ

ಕನಕಪುರ: ಆನೆ ದಾಳಿಯಿಂದ ಮೃತಪಟ್ಟ ಯುವಕ ಚೇತನ್‌ ಕುಮಾರ್‌ ಪೊಲೀಸ್‌ ಆಗುವ ಕನಸು ಕಂಡಿದ್ದರು.

ಅದಕ್ಕಾಗಿ ದೇಹದ ತೂಕ ಕರಗಿಸಲು ಪ್ರತಿದಿನ ಬೆಳಗಿನ ಜಾವ ಜಾಗಿಂಗ್‌ ಮಾಡುತ್ತಿದ್ದರು. ಅವರ ಸ್ನೇಹಿತರಾದ ನವೀನ್‌ ಮತ್ತು ಮಧು ಕೂಡಾ ಇದೇ ಗುರಿಯೊಂದಿಗೆ ಜತೆಯಾಗಿದ್ದರು.

ಪ್ರತಿ ದಿನ ತಾವು ಜಾಗಿಂಗ್‌ ಹೋಗುವ ದೂರವನ್ನು ಹೆಚ್ಚಿಸಿಕೊಳ್ಳುತ್ತಿದ್ದು ಬುಧವಾರ ರಜೆ ಇದ್ದುದರಿಂದ ಕೋಡಿಹಳ್ಳಿವರೆಗೂ ಹೋಗಿ ಬರಬೇಕೆಂದು ತೀರ್ಮಾನಿಸಿ ಇಂದು ಬೇಗನೆ ಹೋಗಿದ್ದರು. ಚೇತನ್‌ ಹಾರೋಹಳ್ಳಿಯ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಅವರ ತಂದೆ ಕಬ್ಬಾಳಮ್ಮ ದೇವಸ್ಥಾನದ ಅರ್ಚಕ.

ಅಕ್ಕನ ಮದುವೆಗೆ ಸಿದ್ಧತೆ:ಮೃತ ಚೇತನ್‌ಕುಮಾರ್‌ಗೆ ಅವರ ಅಕ್ಕನ ವಿವಾಹ ಮುಂದಿನ ತಿಂಗಳಿಗೆ ನಿಗದಿಯಾಗಿತ್ತು. ಕುಟುಂಬಕ್ಕೆ ಆಧಾರವಾಗಿದ್ದ ಚೇತನ್‌ ಅಗಲಿಕೆ ಅವರಿಗೆ ಆಘಾತ ನೀಡಿದೆ.

ದಾಳಿಗಳ ಕರಾಳ ಹಿನ್ನೋಟ:ಈ ಭಾಗದ ಗ್ರಾಮಗಳು ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಗೆ ಸೇರಿವೆ. ಇತ್ತೀಚೆಗೆ ಕಾಡಾನೆ ದಾಳಿಯಿಂದ ನಾರಾಯಣಪುರದಲ್ಲಿ ವೆಂಕಟೇಶ್‌, ಅರಗಾಡು ದೇವಮ್ಮ, ಕೂತಗಳೆ ಸುರೇಶ್‌, ಸುಂಡಘಟ್ಟ ರಾಜಣ್ಣ ಎಂಬುವರನ್ನು ಸಾಯಿಸಿವೆ. ಈಗ ಚೇತನ್‌ ಬಲಿಯಾಗಿದ್ದಾರೆ.

ಆಕ್ರೋಶ:ಯುವಕ ಮೃತಪಟ್ಟಿರುವ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು, ರೈತರು ಸಾವಿರಾರು ಸಂಖ್ಯೆಯಲ್ಲಿ ಘಟನಾ ಸ್ಥಳದಲ್ಲಿ ಜಮಾಯಿಸಿ ಘಟನೆಯನ್ನು ಖಂಡಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು. ಮೃತದೇಹವನ್ನು ಇಲ್ಲಿಂದ ತೆಗೆಯಲು ಬಿಡುವುದಿಲ್ಲವೆಂದು ರಸ್ತೆ ತಡೆದು ಪ್ರತಿಭಟನೆಗೆ ಮುಂದಾದರು.
ರೈತರ ವಿರೋಧ ಹೆಚ್ಚಾಗುತ್ತಿದ್ದಂತೆ ಅರಣ್ಯಾಧಿಕಾರಿಗಳು ಪೊಲೀಸರ ಮೊರೆಹೋದರು. ಘಟನಾ ಸ್ಥಳದಲ್ಲಿ ರೈತರು ಪ್ರತಿಭಟನೆಗೆ ಮುಂದಾಗಿರುವ ವಿಷಯ ತಿಳಿದ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಸ್ಥಳಕ್ಕೆ ಆಗಮಿಸಿ ರೈತರನ್ನು ಸಮಾಧಾನಗೊಳಿಸಿದರು.

ಮೃತರ ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರ ಹಣವನ್ನು ಶೀಘ್ರವೇ ಕೊಡಿಸುವುದಾಗಿ ಹಾಗೂ ಪರಿಹಾರ ಹಣದ ಜತೆಗೆ ಪ್ರತಿ ತಿಂಗಳು ಮೃತರ ಕುಟುಂಬಕ್ಕೆ ₹ 2 ಸಾವಿರ ಮಾಶಾಸನ ಕೊಡಿಸುವ ಭರವಸೆ ನೀಡಿದರು. ನಂತರ ಸ್ಥಳದಿಂದ ಮೃತದೇಹವನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರಿಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.

ಪರಿಹಾರ:ಆನೆ ತುಳಿದು ಸಾವನಪ್ಪುವವರಿಗೆ ಸರ್ಕಾರದಿಂದ ಸಿಗುವ ಪರಿಹಾರ ಮೊತ್ತ ₹ 5 ಲಕ್ಷವನ್ನು ಚೇತನ್‌ ಕುಟುಂಬದವರಿಗೆ ನೀಡುತ್ತೇವೆ. ಪ್ರತಿ ತಿಂಗಳು ₹ 2 ಸಾವಿರ ಮಾಸಾಶನವನ್ನು ಕೊಡಿಸುತ್ತೇವೆ ಎಂದು ವಲಯ ಅರಣ್ಯಾಧಿಕಾರಿ ದಿನೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT