ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜೈಲಿಗೆ ಬಂದ ಪಾದರಾಯನಪುರ ಗಲಭೆಕೋರರ ಪೈಕಿ ಇಬ್ಬರಿಗೆ ಪಾಸಿಟಿವ್‌

ರಾಮನಗರ ಜೈಲಿನಲ್ಲಿರುವ 121 ಆರೋಪಿಗಳು ಮತ್ತೆ ಬೆಂಗಳೂರಿಗೆ ಸ್ಥಳಾಂತರ ಸಾಧ್ಯತೆ
Last Updated 24 ಏಪ್ರಿಲ್ 2020, 1:32 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರಿನ ಪಾದರಾಯನಪುರದಲ್ಲಿ ದಾಂದಲೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿ ರಾಮನಗರ ಜೈಲು ಸೇರಿದ್ದ ಇಬ್ಬರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ.

ಈ ಆರೋಪಿಗಳನ್ನು ಮಂಗಳವಾರವಷ್ಟೇ ಬೆಂಗಳೂರಿನಿಂದ ರಾಮನಗರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಈ ಸಂದರ್ಭ ಅವರ ಆರೋಗ್ಯ ತಪಾಸಣೆ ನಡೆಸಿ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರಲ್ಲಿ ಸೋಂಕು ತಗುಲಿರುವುದು ಖಾತ್ರಿಯಾಗಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಧೃಡಪಡಿಸಿದ್ದಾರೆ. ಸೋಂಕು ಖಾತ್ರಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸೋಂಕಿತರನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಶಿಫ್ಟ್‌ ಮಾಡಿದ್ದಾರೆ.

ಜೈಲಿನಲ್ಲಿ ಇರುವ ಉಳಿದ ಆರೋಪಿಗಳನ್ನೂ ಬೆಂಗಳೂರಿನ ಹಜ್‌ ಭವನಕ್ಕೆ ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಮೊದಲ ದಿನ 49 ಕೈದಿಗಳನ್ನು ಸ್ಥಳಾಂತರ ಮಾಡಿ ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಅವರಲ್ಲಿ ಇಬ್ಬರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಉಳಿದ 72 ವರದಿಗಳು ಇನ್ನಷ್ಟೇ ಬರಬೇಕಿದೆ ಎಂದು ಹೇಳಲಾಗಿದೆ.

ಪಾದರಾಯನಪುರದಲ್ಲಿ ಕೋವಿಡ್‌-19 ಶಂಕಿತರನ್ನು ಕ್ವಾರಂಟೈನ್ ಮಾಡಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಈ ಆರೋಪಿಗಳು ಹಲ್ಲೆ ಹಾಗೂ ಸ್ಥಳದಲ್ಲಿ ದಾಂದಲೆ ನಡೆಸಿದ್ದರು. ಒಟ್ಟಾರೆ 121 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಪಡೆದಿದ್ದು, ಅವರೆಲ್ಲರನ್ನೂ ಹಂತಹಂತವಾಗಿ ರಾಮನಗರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಇದಕ್ಕೂ ಮುನ್ನ ರಾಮನಗರ ಜೈಲಿನಲ್ಲಿ ಇದ್ದ 177 ಖೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಸಿಬ್ಬಂದಿಗೂ ಕ್ವಾರಂಟೈನ್: ಸೋಂಕು ಧೃಡಪಟ್ಟಿರುವ ಕಾರಣ ಜೈಲಿನಲ್ಲಿದ್ದ ಉಳಿದ ಆರೋಪಿಗಳ ಮೇಲೂ ನಿಗಾ ವಹಿಸುವುದು ಅನಿವಾರ್ಯ ಆಗಲಿದೆ. ಜೈಲು ತುಂಬ ಇಕ್ಕಟ್ಟಾಗಿದ್ದು, ಒಂದೇ ಕೊಠಡಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ಇರಿಸಲಾಗಿತ್ತು. ಇವರೊಂದಿಗೆ ಜೈಲಿನ ಸಿಬ್ಬಂದಿ ಹಾಗೂ ಸ್ಥಳಾಂತರ ಕಾರ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸರನ್ನೂ ಕ್ವಾರಂಟೈನ್‌ಗೆ ಒಳಪಡಿಸುವ ಸಾಧ್ಯತೆ ಇದೆ.

ಸುದ್ದಿ ಖಾತ್ರಿಯಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ‘ಈ ಮೊದಲೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ತಿಳಿಸಿದ್ದೆ. ಅಧಿಕಾರಿಗಳ ಯಡವಟ್ಟಿನಿಂದಾಗಿ ಅನಾಹುತ ಆಗಿದೆ. ರಾಮನಗರದಲ್ಲಿ ಈವರೆಗೆ ಒಂದೂ ಘಟನೆ ಆಗಿರಲಿಲ್ಲ. ಜಿಲ್ಲಾಧಿಕಾರಿ ಕೂಡಲೇ ಆರೋಪಿಗಳ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ನಿಜಕ್ಕೂ ಈ ಘಟನೆ ದುರದೃಷ್ಟಕರ’ ಎಂದು ತಿಳಿಸಿದರು.

‘ಸೋಂಕಿತರನ್ನು ರಾಮನಗರದ ಕೋವಿ‌ಡ್‌-19 ಆಸ್ಪತ್ರೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಹೊರಟಿದ್ದರು. ಆದರೆ ಅಲ್ಲಿ ಅಗತ್ಯ ಸಿಬ್ಬಂದಿ ಹಾಗೂ ಸಲಕರಣೆಗಳು ಇಲ್ಲ. ಹೀಗಾಗಿ ವಿಷಯ ತಿಳಿಯುತ್ತಿದ್ದಂತೆ ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಬೆಂಗಳೂರಿಗೆ ಸ್ಥಳಾಂತರ ಮಾಡಲು ಹೇಳಿದ್ದೇನೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT