ಬುಧವಾರ, ಜನವರಿ 29, 2020
26 °C
ತೊರೇಪಾಳ್ಯ ಪಿರಮಿಡ್ ಶಾಲೆಯಲ್ಲಿ ಸಂಸ್ಥಾಪಕರ ಪ್ರತಿಮೆ ಅನಾವರಣ

ಬಾನಂಗಳದ ಜ್ಞಾನ ಭಾಸ್ಕರನಂತಿದ್ದ ವಿಜ್ಞಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಶಾಲೆಯೇ ದೇವಾಲಯ, ಮಕ್ಕಳೇ ದೇವರು ಎಂದು ನಂಬಿದ್ದ ವಿಜ್ಞಾನಿ ಎಂ.ಆರ್.ರಾಮಮೂರ್ತಿ ಮಕ್ಕಳ ಪಾಲಿನ ಬಾನಂಗಳದ ಜ್ಞಾನ ಭಾಸ್ಕರನಂತಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್. ತಿಳಿಸಿದರು.

ಪಾರಂಗ ಚಾರಿಟಬಲ್ ಟ್ರಸ್ಟಿನ ವತಿಯಿಂದ ತೊರೇಪಾಳ್ಯದ ಪಿರಮಿಡ್ ಶಾಲೆಯಲ್ಲಿ ಶುಕ್ರವಾರ ನಡೆದ ಸಂಸ್ಥಾಪಕರ ಸ್ಮರಣ ದಿನಾಚರಣೆ ಅಂಗವಾಗಿ ಸಂಸ್ಥಾಪಕರ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

‘ರಾಮಮೂರ್ತಿ, ಕೆಂಪೇಗೌಡರ ಸೀಮೆಯ ಶಿಕ್ಷಕರು ಮತ್ತು ಪೋಷಕರ ಪಾಲಿಗೆ ಎಂದಿಗೂ ಮರೆಯಲಾರದ ಆದರ್ಶಮಯ ವ್ಯಕ್ತಿ. ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ನಿಸ್ವಾರ್ಥಸೇವೆ ಸಲ್ಲಿಸುವ ಮೂಲಕ ಮುಗ್ಧ ಮನಸ್ಸಿನ ಮಕ್ಕಳನ್ನು ಅಪ್ಪಟ ರಾಷ್ಟ್ರಪ್ರೇಮಿಗಳನ್ನಾಗಿ ಮಾಡಬೇಕಿದೆ’ ಎಂದರು.

ಮ್ಯಾನೇಜಿಂಗ್ ಟ್ರಸ್ಟಿ ಎಂ.ಆರ್.ಛಾಯ ಮಾತನಾಡಿ, ಶಾಲೆಯ ದಾನಿಗಳು ಮತ್ತು ಪೋಷಕರು ಸಂಸ್ಥೆ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಬಡವರ ಮಕ್ಕಳ ಬದುಕನ್ನು ಹಸನು ಮಾಡಲು ಶ್ರಮಿಸುವುದಾಗಿ ತಿಳಿಸಿದರು.

ಪಾರಂಗ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ಕಿರಣ್ ಶರ್ಮ ಜ್ಯೋತಿ ಪ್ರಸರಣ ಶ್ಲೋಕ ಓದಿ, ಅರ್ಥ ವಿವರಿಸಿ ಮಾತನಾಡಿ ವಿದ್ಯಾರ್ಥಿಗಳು ಜ್ಞಾನದೀಪಗಳಾಗಿ ಧರ್ಮದ ದಾರಿಗೆ ಮಾರ್ಗದರ್ಶಿಗಳಾಗಬೇಕು. ಬೆಂಕಿಯಾಗದೆ ಜ್ಯೋತಿಯಾಗಿ ಪ್ರಜ್ವಲಿಸಬೇಕು. ಸತ್ಯವನ್ನೇ ಹೇಳು, ಧರ್ಮ ಆಚರಿಸು, ಅಧ್ಯಯನ ನಿಲ್ಲಿಸಬೇಡ ಎಂದು ಕಿವಿಮಾತು ಹೇಳಿದರು.

ಆರೋಗ್ಯ ಕಾಪಾಡಿಕೊಂಡು ಸಂಪಾದಿಸು, ತಾಯಿತಂದೆ ಸೇವೆ ಮಾಡು, ಮಾತಾಪಿತರನ್ನು ದೇವರಂತೆ ನೋಡಿಕೊಳ್ಳಬೇಕು. ಅತಿಥಿಗಳನ್ನು ಭಗವಂತನಂತೆ ಕಾಣಬೇಕು ಎಂದು ಹಿಂದೆ ಗುರುಕುಲದಲ್ಲಿ ಶಿಷ್ಯರಿಗೆ ಕಲಿಸಿಕೊಟ್ಟದ್ದನ್ನು ಪಾರಂಗ ಪಿರಮಿಡ್ ಶಾಲಾ ಸಂಸ್ಥಾಪಕರಾಗಿದ್ದ ಎಂ.ಆರ್.ರಾಮಮೂರ್ತಿ ಜೀವನದಲ್ಲಿ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದರು. ವಾಯುಸೇನೆಯ ಸಂಶೋಧನಾ ವಿಭಾಗದಲ್ಲಿ ಹಿರಿಯ ವಿಜ್ಞಾನಿ ಹುದ್ದೆಯನ್ನು ತ್ಯಜಿಸಿ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅರ್ಪಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಬೆಂಗಳೂರಿನ ಕ್ಯಾಟರ್ ಪಿಲ್ಲರ್ ಇಂಡಿಯಾದ ನಿರ್ದೇಶಕ ವಿ.ರಾಮರತ್ನಂ ಅವರು ಉದಾತ್ತ ವ್ಯಕ್ತಿತ್ವದ ರಾಮಮೂರ್ತಿ ಅವರ ಸೇವೆಯನ್ನು ಸ್ಮರಿಸಿದರು. ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಎಂ.ಎಸ್. ಜ್ಯೋತಿರಾಘವನ್, ಬಿಸಿಯೂಟ ನೀಡುವ ‘ಅನ್ನಪೂರ್ಣ’ ಸೇವಾ ಕಾರ್ಯ ಮತ್ತು ಶಾಲಾಭಿವೃದ್ಧಿಗೆ ಇನ್ನು ಮುಂದೆಯೂ ಒಳ್ಳೆಯ ಕಾರ್ಯಕ್ರಗಳಿಗೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ವಾಗ್ದೇವಿ ವಿಲಾಸ್ ಸಂಸ್ಥೆಗಳ ಛೇರ್ಮನ್ ಕೆ.ಹರೀಶ್ ಮಾತನಾಡಿ ಶುಭ ಹಾರೈಸಿದರು.

ಅಖಿಲ ಭಾರತ ಬ್ರಾಹ್ಮಣ ಸಭಾ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮೋಹನ್ ಕುಮಾರ್, ಶಿಕ್ಷಣ ತಜ್ಞ ಮಧುಸೂದನ್, ಬೆಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಅಶ್ವತ್ಥನಾರಾಯಣ, ಪಾರಂಗ ಟ್ರಸ್ಟ್‌ನ ಟ್ರಸ್ಟಿಗಳಾದ ವೆಂಕಟರಾಮು, ಲಲಿತಾ, ಶ್ರೀನಿವಾಸ್, ಮಂಜುಳ, ವಿಜಯ್‌ಕುಮಾರ್, ಸದಾಶಿವರಾವ್, ಉಮಾ , ಪ್ರಕಾಶ್, ಭಾಸ್ಕರ್, ಅಪರ್ಣಬಾಬು, ದೀಪಾ.ಎಂ.ಎಸ್, ಲಯನ್ಸ್‌ ಕ್ಲಬ್ ಅಧ್ಯಕ್ಷೆ ಡಾ.ಅನಿತಾ ಪ್ರಸಾದ್, ಮುಖ್ಯಶಿಕ್ಷಕ ಲಕ್ಷ್ಮಣ್ ಸಂಸ್ಥಾಪಕರ ಜೀವನದ ಸಾಧನೆಗಳನ್ನು ಕುರಿತು ಮಾತನಾಡಿದರು.

ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿಭಾ ಪುರಸ್ಕಾರ ನೀಡಲಾಯಿತು. ಪೋಷಕರು, ಶಿಕ್ಷಕರು, ಮಕ್ಕಳು ಇದ್ದರು. ಸಾಧಕ ರಾಮಮೂರ್ತಿ ಎಂಬ ನಾಮಫಲಕ ಅನಾವರಣಗೊಳಿಸಲಾಯಿತು. ಎಚ್‌.ಡಿ.ಕೋಟೆ ಕಪ್ಪುಶಿಲೆಯಲ್ಲಿ 6 ಅಡಿ ಎತ್ತರದ ಪ್ರತಿಮೆ ಎಲ್ಲರ ಗಮನ ಸೆಳೆಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು