ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಸೂರು ಒದಗಿಸಲು ಆಗ್ರಹ

ನಗರಸಭೆ ಆಯುಕ್ತರಿಗೆ ಪ್ರಗತಿಪರ ಸಂಘಟನೆಗಳಿಂದ ಮನವಿ
Published 7 ಡಿಸೆಂಬರ್ 2023, 7:36 IST
Last Updated 7 ಡಿಸೆಂಬರ್ 2023, 7:36 IST
ಅಕ್ಷರ ಗಾತ್ರ

ಕನಕಪುರ: ಬಡವರಿಗೆ ಎರಡು ಸಾವಿರ ಮನೆ ನಿರ್ಮಿಸಲಾಗಿದೆ ಎಂದು ಹೇಳಿ ರಾಜಕೀಯ ಲಾಭ ಮಾಡಿಕೊಳ್ಳುವ ಪಕ್ಷಗಳು ನಿರ್ಮಿಸಿರುವ ಮನೆಗಳನ್ನು 10ವರ್ಷವಾದರೂ ಬಡವರಿಗೆ ಹಸ್ತಾಂತರ ಮಾಡಿಲ್ಲ. ಈಗಾಗಲೇ ಕೊಟ್ಟಿರುವ ಮನೆಗಳಲ್ಲಿ ಮೂಲ ಸೌಕರ್ಯ ಇಲ್ಲದೆ ಜನರು ನರಳುತ್ತಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.

ನಗರಸಭೆ ವ್ಯಾಪ್ತಿಯ ಬಿಜಿಎಸ್ ಬಡಾವಣೆಯಲ್ಲಿ ಬಡವರಿಗಾಗಿ ನಿರ್ಮಿಸುತ್ತಿರುವ ಮನೆಗಳು ಕಳಪೆಯಾಗಿವೆ. ಇದರಿಂದ ಜನರು ಪರದಾಡುತ್ತಿದ್ದಾರೆ. ಸರಿಪಡಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ನಗರಸಭೆ ಆಯುಕ್ತ ಎಂ.ಎಸ್‌.ಮಹದೇವ್‌ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ಸರ್ಕಾರ ರಾಜಕೀಯ ಲಾಭಕ್ಕಾಗಿ ಬಡವರಿಗೆ ಮನೆ ಕೊಡುವ ನಾಟಕವಾಡುತ್ತಿದೆ. ಆದರೆ, ಅದನ್ನು ಬಡವರಿಗೆ ಬದಲಾಗಿ ಶ್ರಿಮಂತರಿಗೆ ಕೊಡಲಾಗಿದೆ ಎಂದು ದೂರಿದರು.

ಬಡಾವಣೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಶೌಚಾಲಯ ನಿರ್ಮಿಸಿಲ್ಲ. ಬೀದಿ ದೀಪಗಳಿಲ್ಲ, ಮೂಲ ಸೌಕರ್ಯಗಳಿಲ್ಲ. ಶೌಚಾಲಯ ಇಲ್ಲದೆ ಜನರು ಈಗಲೂ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರ ಬಯಲು ಮುಕ್ತ ಶೌಚಾಲಯ ಮಾಡುತ್ತಿದೆ. ಆದರೆ, ಇಲ್ಲಿ ನಗರಸಭೆಯೇ ಬಯಲು ಬಹಿರ್ದೆಸೆಗೆ ದೂಡುತ್ತಿದೆ ಎಂದು ದೂರಿದರು.

ಸರ್ಕಾರದಿಂದ ಉಚಿತವಾಗಿ ಮನೆ ಕಟ್ಟಿಕೊಡುವುದಾಗಿ ಹೇಳಿ ನಗರಸಭೆ ಫಲಾನುಭವಿಗಳಿಂದ ₹60 ರಿಂದ ₹80 ಸಾವಿರ ಹಣ ಪಡೆದುಕೊಳ್ಳುತ್ತಿದ್ದಾರೆ. ಯಾವ ಕಾರಣಕ್ಕೆ ಈ ಹಣ ಪಡೆಯುತ್ತಿದ್ದಾರೆ ಎನ್ನುವುದು ಫಲಾನುಭವಿಗಳಿಗೆ ತಿಳಿಯುತ್ತಿಲ್ಲ ಎಂದು ದೂರಿದರು.

ನಗರಸಭೆ ಕಮಿಷನರ್ ಎಂ.ಎಸ್‌.ಮಹಾದೇವ್ ಮಾತನಾಡಿ, ‘ನಾನು ಇಲ್ಲಿಗೆ ಹೊಸದಾಗಿ ಬಂದಿದ್ದೇನೆ. ಈ ಹಿಂದೆ ಏನು ಆಗಿದೆ. ಎಷ್ಟು ಮನೆ ಪೂರ್ಣಗೊಂಡಿದೆ ಎಂದು ಮಾಹಿತಿ ಪಡೆಯಲಾಗುವುದು. ಬಡಾವಣೆಗೆ ಭೇಟಿ ನೀಡಿ ಮನೆ ನಿರ್ಮಾಣದ ಗುಣಮಟ್ಟ ಪರಿಶೀಲನೆ ನಡೆಸಿ, ಬಡವರಿಗೆ ಮನೆಗಳನ್ನು ಹಸ್ತಾಂತರಿಸಲು ಕ್ರಮ ವಹಿಸುವ’ ಭರವಸೆ ನೀಡಿದರು.

ಒಕ್ಕೂಟದ ಸದಸ್ಯರಾದ ವೀರೇಶ್‌, ಸುರೇಶ್‌, ಜಯಸಿಂಹ, ಭಾಸ್ಕರ್‌, ಜಯಸಿಂಹ ಹಾಗೂ ನಗರಸಭೆ ನಟರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT