ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ತಡೆಗೆ ಲಸಿಕೆ ಅನಿವಾರ್ಯ: ಸಂಸದ ಡಿ.ಕೆ. ಸುರೇಶ್‌ ಸಲಹೆ

Last Updated 22 ಆಗಸ್ಟ್ 2021, 3:27 IST
ಅಕ್ಷರ ಗಾತ್ರ

ಕನಕಪುರ: ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆದರೆ, ಲಸಿಕೆ ಪಡೆಯುವ ಮೂಲಕ ಅದರ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದ ಡಿಸ್ಕವರಿ ವಿಲೇಜ್‌ನಲ್ಲಿ ಡಿಸ್ಕವರಿ ವಿಲೇಜ್‌ ವತಿಯಿಂದ ಶನಿವಾರ ನಡೆದ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೋಂಕು ಇನ್ನು ಹೋಗಿಲ್ಲ. ಆದರೆ ಯಾರು ಎರಡು ಹಂತದ ಲಸಿಕೆ ಹಾಕಿಸಿಕೊಂಡಿದ್ದಾರೋ ಅವರಿಗೆ ಸೋಂಕಿನ ತೀವ್ರತೆ ಕಡಿಮೆಯಾಗುತ್ತದೆ. ಸೋಂಕು ತಗುಲಿದರೂ ಪ್ರಾಣಾಪಾಯದಿಂದ ಪಾರಾಗಬಹುದು ಎಂದು
ಹೇಳಿದರು.

ಸರ್ಕಾರ ಈವರೆಗೂ ಶೇ 20ರಷ್ಟು ಮಂದಿಗೆ 2ನೇ ಡೋಸ್‌ ಕೊಟ್ಟಿದೆ. ಶೇ 30ರಷ್ಟು ಮಂದಿಗೆ 1ನೇ ಡೋಸ್‌ ಆಗಿದೆ. ಎಲ್ಲರಿಗೂ ಲಸಿಕೆ ಪಡೆಯಬೇಕಾದರೆ ಇನ್ನೂ 6 ರಿಂದ 9 ತಿಂಗಳು ಬೇಕಿದೆ. ಅದಕ್ಕಾಗಿ ಡಿಸ್ಕವರಿ ವಿಲೇಜ್‌‌ನವರು ಸ್ವಂತ ಹಣದಿಂದ ವ್ಯಾಕ್ಸಿನ್‌ ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿದ್ದಾರೆ ಎಂದರು.

ಡಿಸ್ಕವರಿ ವಿಲೇಜ್‌ನವರು ಇಲ್ಲಿಗೆ ಬಂದು 10 ವರ್ಷಗಳಾಗಿವೆ. ಕಸ ಸಂಗ್ರಹಣೆ, ಒಣ ಮತ್ತು ಹಸಿ ಕಸ ಪ್ರತ್ಯೇಕಿಸುವುದು, ಸ್ವಚ್ಛತೆ ಕಾಪಾಡುವುದನ್ನು ಮಾಡಿದ್ದಾರೆ. ಪಂಚಾಯಿತಿಯ ಕಸ ಸಂಗ್ರಹಣೆಗೆ ₹ 3 ಲಕ್ಷ ವೆಚ್ಚದಲ್ಲಿ ಆಟೊ ಕೊಟ್ಟಿದ್ದಾರೆ. ಸಾರ್ವಜನಿಕವಾಗಿ ಅವರು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ನಾವು ಬೆಂಬಲ ನೀಡಬೇಕಿದೆ. ಎಲ್ಲರೂ ಉತ್ತಮ ಸಮಾಜದ ನಿರ್ವಹಣೆಗೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

ಮೂರನೇ ಅಲೆಯಲ್ಲಿ ವೈರಸ್‌ ರೂಪಾಂತರಿಯಾಗಿದ್ದು ಅದರ ಬಗ್ಗೆ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಕೋವಿಡ್‌ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಕೊರೊನಾ ನಿಯಮ ಮತ್ತು ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಿ ಕೋವಿಡ್‌ನಿಂದ ದೂರ ಇರಬೇಕು ಎಂದು ಹೇಳಿದರು.

ಡಿಸ್ಕವರಿ ವಿಲೇಜ್‌ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಪ್ರಕಾಶ್‌ ಮಾತನಾಡಿ, ಕಸ ಭೂಮಿಯನ್ನು ಸೇರಿದರೆ ಅದು ವಿಷವಾಗುತ್ತದೆ. ಅದಕ್ಕಾಗಿ ಕೊಳೆಯದ ಕಸವನ್ನು ಬೇರ್ಪಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಸುತ್ತಮುತ್ತಲಿನ ಕೆರೆಗಳ ಅಭಿವೃದ್ಧಿ ಮಾಡುತ್ತಿದೆ. ಅಂತರ್ಜಲ ಹೆಚ್ಚಳಕ್ಕೆ ಕಾರ್ಯಕ್ರಮ ರೂಪಿಸಿದೆ. ಇಲ್ಲಿ ಕೆಲಸ ಮಾಡಲು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.

ಸೋಂಕು ತಡೆಗಟ್ಟಲು ಪ್ರತಿಯೊಬ್ಬರಿಗೂ ಕಡ್ಡಾಯವಾಗಿಲಸಿಕೆ ನೀಡಬೇಕಿದೆ. ಅದಕ್ಕಾಗಿ ಸಂಸ್ಥೆ ವತಿಯಿಂದ ಒಂದು ಸಾವಿರ ಜನಕ್ಕೆ ಲಸಿಕೆ ಖರೀದಿ ಮಾಡಿ ಉಚಿತವಾಗಿ ನೀಡುತ್ತಿದ್ದೇವೆ. ಸುತ್ತಮುತ್ತಲಿನ ಜನತೆ ಲಸಿಕೆ ಪಡೆದುಕೊಳ್ಳಬೇಕೆಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ಎ. ಇಕ್ಬಾಲ್‌ ಹುಸೇನ್‌, ಮಾಜಿ ಉಪಾಧ್ಯಕ್ಷೆ ಸೌಭಾಗ್ಯಾ, ಮಾಜಿ ಸದಸ್ಯ ಎಚ್‌.ಕೆ. ನಾಗರಾಜು, ಪ್ರಗತಿಪರ ರೈತ ಕೀರಣಗೆರೆ ಜಗದೀಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌, ಬಮೂಲ್‌ ನಿರ್ದೇಶಕ ಎಚ್‌.ಎಸ್‌. ಹರೀಶ್‌ಕುಮಾರ್‌, ಮುಖಂಡರಾದ ಮೋಹನ್‌ ಹೊಳ್ಳ, ಜಗದೀಶ್ವರ ಗೌಡ, ರಾಜಣ್ಣ, ಈಶ್ವರ್‌, ಪಂಚೆ ಕೃಷ್ಣಪ್ಪ, ಎಚ್‌.ಸಿ. ಶೇಖರ್‌, ಕೋಟೆ ಕುಮಾರ್‌, ಗಬ್ಬಾಡಿ ಸುರೇಶ್‌, ಸೀನಪ್ಪ, ಬಾಲಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT