ಗುರುವಾರ , ಸೆಪ್ಟೆಂಬರ್ 23, 2021
24 °C

ಕೋಡಿಪಾಳ್ಯ: ವಿನಾಯಕ ವಾರ್ಷಿಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲ್ಲೂಕಿನ ಕೋಡಿಪಾಳ್ಯ ಗ್ರಾಮದ ಯುವಕರಿಂದ ವಿನಾಯಕ ವಾರ್ಷಿಕೋತ್ಸವ ಸರಳವಾಗಿ ನಡೆಯಿತು.

ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ‘ಲೋಕಮಾನ್ಯ ಬಾಲಗಂಗಾಧರ ತಿಲಕ್‌ ಯುವಜನತೆಯನ್ನು ಸಂಘಟಿಸಿ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ವಿನಾಯಕ ಉತ್ಸವ ಆರಂಭಿಸಿದರು. ಗ್ರಾಮೀಣ ಭಾಗದ ರೈತಾಪಿ ವರ್ಗದ ಯುವಕರು ಸಂಘಟಿತರಾಗಿ ಗ್ರಾಮಾಭಿವೃದ್ಧಿಗೆ ದುಡಿಯಬೇಕು’ ಎಂದು ಸಲಹೆ ನೀಡಿದರು.

‘ನಾನು ಬಿಜೆಪಿ ಬಿಡದೆ ಅಲ್ಲಿಯೇ ಇದ್ದರೆ ಎಂದೋ ಮುಖ್ಯಮಂತ್ರಿ ಆಗುತ್ತಿದ್ದೆ. ನಾನು, ಚೆಲುವರಾಯಸ್ವಾಮಿ, ಜಮೀರ್‌ ಅಹಮದ್‌ ಖಾನ್‌ ಶ್ರಮವಹಿಸದಿದ್ದರೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಿರಲಿಲ್ಲ’
ಎಂದರು.

‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ರಾಷ್ಟ್ರೀಯ ಪಕ್ಷಗಳು ಮಾತ್ರ ಅಧಿಕಾರಕ್ಕೆ ಬರುವುದರಿಂದ ನಾನು ಆಡಳಿತ ಪಕ್ಷದ ಶಾಸಕನಾದರೆ ಹೆಚ್ಚಿನ ರೀತಿ ಅಭಿವೃದ್ಧಿ ಕೆಲಸ ಮಾಡಿಸಬಹುದು ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. ಹಣದ ಆಸೆಯಿಂದ ಅಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಿಜೆಪಿ ಸರ್ಕಾರದ ವಿರುದ್ಧ ಯುವಜನರು ಪ್ರತಿಭಟನೆ ಮಾಡಬೇಕು. ಬಿಜೆಪಿ ದುರಾಡಳಿತದಿಂದ ಬಗ್ಗೆ ಜನರು ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ’ ಎಂದು
ಹೇಳಿದರು.
ಕೈಗಾರಿಕೆ ಸ್ಥಾಪನೆಯಿಂದ ಯುವಕರಿಗೆ ಉದ್ಯೋಗ ದೊರೆಯಲಿದೆ ಎನ್ನುತ್ತಿರುವ ಶಾಸಕ ಎ. ಮಂಜುನಾಥ್‌ ಅವರು, ಬಿಡದಿ ಕೈಗಾರಿಕೆ ಪ್ರದೇಶದಲ್ಲಿ ಎಷ್ಟು ಯುವಕರಿಗೆ ಉದ್ಯೋಗ ಕೊಡಿಸಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಸವಾಲು ಹಾಕಿದರು.

ಕೊರೊನಾ ಸೋಂಕಿನಿಂದ ನಗರದಲ್ಲಿದ್ದ ಯುವಕರು ಗ್ರಾಮಗಳಿಗೆ ಆಗಮಿಸಿ ವ್ಯವಸಾಯ ಮಾಡುತ್ತಿದ್ದು ಹೇಮಾವತಿ ನೀರು ಬಂದರೆ ಹೆಚ್ಚಿನ ಅನುಕೂಲವಾಗುತ್ತದೆ. 15 ಸಾವಿರಕ್ಕೆ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವ ಬದಲು ಯುವಕರು ಹೈನುಗಾರಿಕೆಯಿಂದ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂದರು.

ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಜಿ.ಪಂ. ಮಾಜಿ ಸದಸ್ಯ ಎಂ.ಕೆ. ಧನಂಜಯ್ಯ, ತಾ.ಪಂ. ಮಾಜಿ ಅಧ್ಯಕ್ಷರಾದ ಕೆ.ಎಚ್. ಶಿವರಾಜ್, ನಾರಾಯಣಪ್ಪ, ಯುವ ಮುಖಂಡರಾದ ಚಾಮೇಗೌಡ, ರಾಜು, ಲಕ್ಷ್ಮಣ, ರಾಮಣ್ಣ, ಭದ್ರಯ್ಯ, ಭೋಜ, ಉಮೇಶ್, ನಾಗರಾಜು, ರುದ್ರೇಶ್, ಕೋಡಿಪಾಳ್ಯ ಡೇರಿ ಅಧ್ಯಕ್ಷ ಉಮೇಶ್, ಚಂದುರಾಯನಹಳ್ಳಿ ಸಿ.ವಿ. ರಾಜಣ್ಣ, ಸಂಗಮೇಶ್, ಗ್ರಾ.ಪಂ. ಮಾಜಿ ಸದಸ್ಯ ಅರುಣ್‌ ಕುಮಾರ್‌, ಸದಸ್ಯ ಸ್ವಾಮಿ, ಧನಲಕ್ಷ್ಮೀ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು