ಮಂಗಳವಾರ, ಏಪ್ರಿಲ್ 13, 2021
26 °C
ಲೇಖನ ಸಾಮಗ್ರಿ, ಸಸಿ, ನೀರಿನ ಕ್ಯಾನ್ ವಿತರಣೆ

‘ಸಮಾಜ ಸೇವೆ ಭರವಸೆಗೆ ಸೀಮಿತವಾಗದಿರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ಸಾಮಾಜಿಕ ಚಟುವಟಿಕೆಗಳು ಕೇವಲ ಭರವಸೆಗಳಿಗೆ ಸೀಮಿತವಾಗಬಾರದು’ ಎಂದು ರಂಗಭೂಮಿ ನಿರ್ದೇಶಕ ಬೆಳಕೆರೆ ಕೆಂಪೇಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೂರಣಗೆರೆ ಗ್ರಾಮದಲ್ಲಿ ‘ಸಮಾಜ ಸೇವಕ ಕೆ.ವಿ.ಕೃಷ್ಣಪ್ಪ ಅಭಿಮಾನಿ ಬಳಗ’ದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮವಸ್ತ್ರ, ಶೂ, ಲೇಖನ ಸಾಮಗ್ರಿ ವಿತರಣೆ, ರೈತರಿಗೆ ಸಸಿ, ಗ್ರಾಮಸ್ಥರಿಗೆ ನೀರಿನ ಕ್ಯಾನ್ ವಿತರಣೆ ಹಾಗೂ ಗ್ರಾಮದ ಎರಡು ಅರಳಿ ಕಟ್ಟೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ಸಮಾಜದ ಅಭಿವೃದ್ಧಿಗೆ ಸೇವೆಯ ಅಗತ್ಯವಿದೆ. ಬಳಗದ ವತಿಯಿಂದ ಗ್ರಾಮದಲ್ಲಿ ಎರಡು ಅರಳಿಕಟ್ಟೆಗಳ ನಿರ್ಮಾಣ, ಶಾಲಾ ಮಕ್ಕಳಿಗೆ ಹಲವು ಪರಿಕರ ವಿತರಣೆ, ಗ್ರಾಮಸ್ಥರಿಗೆ ನೀರಿನ ಕ್ಯಾನ್ ವಿತರಣೆ ಮಾಡಿರುವುದು ಸಂತಸದ ವಿಚಾರ. ಇಂತಹ ಸೇವಾ ಕಾರ್ಯಗಳು ಯುವ ಸಮೂಹಕ್ಕೆ ಮಾದರಿ’ ಎಂದರು.

ವಿಶ್ವಮಾನವ ಪ್ರೌಢಶಾಲೆಯ ಪ್ರಾಂಶುಪಾಲ ನಾಥೇಗೌಡ ಮಾತನಾಡಿ, ‘ದಾನ–ಧರ್ಮ ಇತರರನ್ನು ನೋಡಿ ಕಲಿಯುವುದಲ್ಲ. ಅದು ಅಂತರಾಳದಿಂದ ಬರಬೇಕು. ಗ್ರಾಮದಲ್ಲಿ ಕೆ.ವಿ.ಕೃಷ್ಣಪ್ಪ ಅಭಿಮಾನಿ ಬಳಗ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಸಂಘ–ಸಂಸ್ಥೆಗಳು ಇಂತಹ ಪ್ರಗತಿ ಕಾರ್ಯಗಳನ್ನು ನಡೆಸಿದಾಗ ಮಾತ್ರ ಸಂಘಟನೆ ಸ್ಥಾಪನೆಗೆ ಅರ್ಥ ಬರುತ್ತದೆ’ ಎಂದರು.

ಸಮಾಜ ಸೇವಕ ಕೆ.ವಿ.ಕೃಷ್ಣಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ಏಕಾಗ್ರತೆ, ಸತತ ಅಭ್ಯಾಸದ ಮೂಲಕ, ಶೈಕ್ಷಣಿಕ ಪ್ರಗತಿ ಸಾಧಿಸಿ, ಉನ್ನತ ಸ್ಥಾನ ಅಲಂಕರಿಸಬೇಕು. ಆ ಮೂಲಕ ತಂದೆ–ತಾಯಿಗಳಿಗೆ ಕೀರ್ತಿ ತರಬೇಕು. ಹಾಗೆಯೇ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಪಣ ತೊಡಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಸ್‌ಪಿ ಅಧ್ಯಕ್ಷ ಶಿವರಾಂ, ಅಭಿಮಾನಿ ಬಳಗದ ಡಿ.ಅರುಣ್ ಕುಮಾರ್, ಸುರೇಶ್, ಕೆ.ಜಿ. ರಾಜು, ಕೆ.ಗೋಪಾಲ್, ಕೆ.ವಿ.ವೆಂಕಟೇಶ್, ಶಿವಕುಮಾರ್, ಅಪ್ಪಾಜಿ, ಚಂದ್ರ, ಸತೀಶ, ಡಿ.ರಮೇಶ್, ಕೆ.ಜಿ.ರಾಜೇಶ್, ಕೆ.ಜಿ.ಕೆಂಗಲ್ಲ, ಗ್ರಾಮದ ಹಿರಿಯರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.