ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿಷ್ಕಾರಗೊಂಡಿದ್ದ ಮಹಿಳೆ 35 ವರ್ಷದ ಬಳಿಕ ಊರಿಗೆ: ಪ್ರಜಾವಾಣಿ ವರದಿ ಫಲಶ್ರುತಿ

Published 4 ಅಕ್ಟೋಬರ್ 2023, 8:08 IST
Last Updated 4 ಅಕ್ಟೋಬರ್ 2023, 8:08 IST
ಅಕ್ಷರ ಗಾತ್ರ

ಹಾರೋಹಳ್ಳಿ: ತಾಲ್ಲೂಕಿನ ಅಗರ ಗ್ರಾಮದಲ್ಲಿ ಸುಮಾರು 35 ವರ್ಷಗಳಿಂದ ಬಹಿಷ್ಕಾರಕ್ಕೆ ಒಳಗಾಗಿದ್ದ ಮಹಿಳೆ ಸಾಕಮ್ಮ ಅವರು ‘ಪ್ರಜಾವಾಣಿ’ ವರದಿ ಫಲಶ್ರುತಿಯಿಂದಾಗಿ ಸ್ವಗ್ರಾಮಕ್ಕೆ ಬಂದಿದ್ದಾರೆ. ಬಹಿಷ್ಕಾರ ಕುರಿತು ಗ್ರಾಮದಲ್ಲಿ ಬುಧವಾರ ನಡೆದ ಶಾಂತಿಸಭೆಯು ಇಂತಹದ್ದೊಂದು ಬೆಳವಣಿಗೆಗೆ ಕಾರಣವಾಯಿತು.

ಕಾಡು ಕುರುಬ ಸಮುದಾಯದವರು ವಾಸವಾಗಿರುವ ಗ್ರಾಮದಲ್ಲಿ ಸಮುದಾಯ ಬಹಿಷ್ಕಾರ ಜೀವಂತವಾಗಿರುವ ಕುರಿತು ‘ಪ್ರಜಾವಾಣಿ’ಯು ಸೆ. 26ರಂದು ವಿಶೇಷ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಬಹಿಷ್ಕಾರದ ಕುರಿತು ಮಾಹಿತಿ ಕಲೆ ಹಾಕಿದ್ದರು.

ಮುಂದುವರಿದ ಭಾಗವಾಗಿ ಇಂದು ಗ್ರಾಮದಲ್ಲಿ ತಹಶೀಲ್ದಾರ್ ವಿಜಿಯಣ್ಣ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಪ ನಿರ್ದೇಶಕ ಜಯಪ್ರಕಾಶ್ ಅಧಿಕಾರಿಗಳು, ಸಮುದಾಯದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ, ಬಹಿಷ್ಕಾರಕ್ಕೆ ಒಳಗಾಗಿದ್ದ ಸಾಕಮ್ಮ ಅವರನ್ನು ಗ್ರಾಮಕ್ಕೆ ಬರ ಮಾಡಿಕೊಳ್ಳಲಾಯಿತು.

ಊರಿಗೆ ಬಂದ ಸಾಕಮ್ಮ ಅವರಿಗೆ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಹೂವಿನಹಾರ ಹಾಕಿ ಸ್ವಾಗತ ಕೋರಿದರು. ಮೂವತ್ತೈದು ವರ್ಷಗಳ ನಂತರ ತವರಿಗೆ ಮರಳಿದ ಸಾಕಮ್ಮ ಅವರು ಈ ವೇಳೆ ಗದ್ಗದಿತರಾದವರು. ತಮ್ಮ ಕುಟುಂಬದವರು ಹಾಗೂ ಸಂಬಂಧಿಕರನ್ನು ಕಣ್ತುಂಬಿಕೊಂಡ ಅವರ ಕಣ್ಣುಗಳಲ್ಲಿ ಆನಂದಬಾಷ್ಪ ಬಂತು.

ಬಳಿಕ ಮಾತನಾಡಿದ ವಿಜಿಯಣ್ಣ, ‘ಬಹಿಷ್ಕಾರ ಹಾಕುವುದು ಕಾನೂನು ಪ್ರಕಾರ ಅಪರಾಧ. ಯಾರೇ ಮಾಡಿದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ತಪ್ಪು ಮಾಡಬಾರದು ಎಂಬ ಉದ್ದೇಶದಿಂದ ಹಿಂದೆ ಹಿರಿಯರು ನಿಯಮ ಮಾಡಿದ್ದರು. ಅದನ್ನು ಕೆಲವರು ದುರುಪಯೋಗ ಮಾಡಿಕೊಂಡು ಬಹಿಷ್ಕಾರ ಹಾಕಿ, ಹಣ ವಸೂಲಿ ಮಾಡುವುದು ಸರಿಯಲ್ಲ. ಮುಂದೆ ಇಂತಹ ಘಟನೆಗಳು ಗ್ರಾಮದಲ್ಲಿ ಜರುಗಬಾರದು’ ಎಂದು ಎಚ್ಚರಿಕೆ ನೀಡಿದರು.

ಹಾರೋಹಳ್ಳಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ನಟರಾಜ್, ಮುಖಂಡರಾದ ನೀಲಿ ರಮೇಶ್, ನಾಗೇಶ್ ಹಾಗೂ ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT