ಶುಕ್ರವಾರ, ಆಗಸ್ಟ್ 7, 2020
22 °C
ಕನಕಪುರ

ದುಡಿಮೆ ಒಂದು ಭಾಗ ಸಮಾಜಕ್ಕೆ ಮೀಸಲಿಡಿ: ಏಳಗಳ್ಳಿ ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಗಳಿಸಿದ ಸಂಪತ್ತು, ಆಸ್ತಿ ಹಿಂದೆ ಬರುವುದಿಲ್ಲ. ನಾವು ಮಾಡಿದ ದಾನ ಧರ್ಮ ಮಾತ್ರ ನಂತರವೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಏಳಗಳ್ಳಿ ರವಿ ಹೇಳಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಚ್‌.ಎಸ್‌.ಜಗದೀಶ್‌ ಅಭಿಮಾನಿಗಳ ಬಳಗದ ವತಿಯಿಂದ ನಡೆದ ಗಿಡನೆಡುವ ಕಾರ್ಯಕ್ರಮ ಹಾಗೂ ಬಡವರಿಗೆ ಮನೆ ನಿರ್ಮಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಾಜ ನಮಗಾಗಿ ಎಲ್ಲವನ್ನು ಕೊಟ್ಟಿದೆ. ಎಲ್ಲವನ್ನು ಉಚಿತವಾಗಿ ಪಡೆಯುವ ನಾವು ವಾಪಸು ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಬೇಕು. ಅದರಂತೆ ಜಗದೀಶ್‌ ಅವರು ಬಡವರೊಬ್ಬರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡುತ್ತಿದ್ದಾರೆ. ರಸ್ತೆ ಬದಿಯಲ್ಲಿ ಗಿಡ ನೆಡಸುತ್ತಿದ್ದಾರೆ. ಅವರ ಸಮಾಜ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

ಪರಿಸರದ ಅಸಮತೋಲನದಿಂದ ಪ್ರಕೃತಿ ವಿಕೋಪ ಉಂಟಾಗುತ್ತಿದೆ. ಕೊರೊನಾ ಇಡೀ ವಿಶ್ವವನ್ನೇ ನಲುಗಿಸಿದೆ. ಇದರಿಂದ ರಕ್ಷಿಸಿಕೊಳ್ಳಬೇಕಿದೆ. ಇದಕ್ಕಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ ಮನವಿ ಮಾಡಿದರು.

ಸಮಾಜ ಸೇವಕ ಜಗದೀಶ್ ಮಾತನಾಡಿ, ಸಮಾಜ ನಮಗೆ ಉತ್ತಮ ಬದುಕು ನೀಡಿದೆ. ನಾವು ಈ ಪರಿಸರ ಉಳಿಸುವ ಕೆಲಸ ಮಾಡಬೇಕಿದೆ. ಇದಕ್ಕಾಗಿ ರಸ್ತೆ ಬದಿಯಲ್ಲಿ ಸುಮಾರು 300 ಸಸಿಗಳನ್ನು ನೆಡುವ ಕೆಲಸ ಮಾಡುತ್ತಿದ್ದು ಅವುಗಳನ್ನು ಜೋಪಾನ ಮಾಡಿ ಬೆಳಸುವುದಾಗಿ ಹೇಳಿದರು.

ನಾವು ಮಾಡುವ ಸಂಪದಾನೆಯಲ್ಲಿ ಒಂದು ಭಾಗ ಸಮಾಜದ ಸೇವೆಗೆ ಬಳಸುತ್ತಿದ್ದು ಸುತ್ತಕಟ್ಟಿ ಗ್ರಾಮದ ವೃದ್ಧರೊಬ್ಬರಿಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿದರು. 

ಜಿಲ್ಲಾ ಪಂಚಾಯಿತಿ ಸದಸ್ಯ ದಾಡಿ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗು, ಎಪಿಎಂಸಿ ಅಧ್ಯಕ್ಷ ಶಿವಣ್ಣಗೌಡ, ಮುಖಂಡರಾದ ನಲ್ಲಹಳ್ಳಿ ಶಿವು, ಹಾರೋಶಿವನಹಳ್ಳಿ ರುದ್ರೇಶ್, ಶಿವಕುಮಾರ್ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.