ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಹೊಲದ ಬಂಡೆ ಕೆಳಗೆ ಮಣ್ಣಿನ ಗುಹೆ ಪತ್ತೆ, ಒಳಗಿತ್ತು ಪುರಾತನ ಪೂಜಾ ಸಾಮಗ್ರಿ

ಕಣ್ಣೂರು ಮಕ್ಕಳ ದೇವರ ಮಠದ ಹೊಲದಲ್ಲಿ ಬಂಡೆ ಕೆಳಗೆ ದೊರೆತ ವಸ್ತುಗಳು
Last Updated 8 ಆಗಸ್ಟ್ 2021, 11:17 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಕಣ್ಣೂರು ಗ್ರಾಮದ ಮಕ್ಕಳ ದೇವರ ಮಠದ ಹೊಲದಲ್ಲಿ ಮಣ್ಣಿನ ಗುಹೆ ಪತ್ತೆಯಾಗಿದೆ. ತಾಮ್ರ, ಹಿತ್ತಾಳೆ ಮತ್ತು ಕಂಚುಮುಟ್ಟಿನ ಪೂಜಾ ಸಾಮಾಗ್ರಿಗಳೂ ದೊರೆತಿವೆ.

‘ತೆಂಗಿನ ಸಸಿಗೆ ಡ್ರಿಪ್ಸ್ ಹಾಕಿಸಲು ಶನಿವಾರ ಬೆಳಿಗ್ಗೆ 9 ಗಂಟೆಯಲ್ಲಿ ಗುಂಡಿ ತೆಗೆಯಲಾಗುತ್ತಿತ್ತು. ಬಂಡೆಯೊಂದರ ಕೆಳಗೆ ಆರು ಅಡಿಗಳ ಆಳದ ಗುಹೆಯಲ್ಲಿ ಹಿತ್ತಾಳೆ ಮತ್ತು ಕಂಚುಮುಟ್ಟಿನ ಮಣ್ಣಿನಿಂದ ತುಕ್ಕು ಹಿಡಿದಿರುವ ತಟ್ಟೆ, ದೀಪಸ್ತಂಭ, ವಿಭೂತಿ ಗಟ್ಟಿ, ಉಯ್ಯಾಲೆ ಕಂಬ, ಜಾಗಟೆ ಇತರೆ ಒಟ್ಟು 100 ಕೆ.ಜಿ.ತೂಕದ ಹಿತ್ತಾಳೆ ಕಂಚುಮುಟ್ಟಿನ ಸಾಮಗ್ರಿಗಳು ಪತ್ತೆಯಾಗಿವೆ’ ಎಂದು ಮಠಾಧೀಶ ಮೃತ್ಯುಂಜಯ ಸ್ವಾಮಿಜಿ ತಿಳಿಸಿದರು.

ಶ್ರೀಮಠದ ಸ್ವಾಮೀಜಿಯೊಬ್ಬರು ಲೋಕಕಲ್ಯಾಣಕ್ಕಾಗಿ ತಪಗೈದು, ಜೀವಂತ ಸಮಾಧಿ ಹೊಂದಿರಬಹುದು ಎಂಬ ಮಾಹಿತಿ ಇದ್ದು, ಸುತ್ತಲಿನ ಗ್ರಾಮದ ಭಕ್ತರಲ್ಲಿ ಕುತೂಹಲ ಉಂಟಾಗಿದೆ. ತಂಡೋಪ ತಂಡವಾಗಿ ಮಠಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.

ಶ್ರೀಮಠದ ಪರಂಪರೆ: ‘ಕಣ್ಣೂರು ಚೌಡಿ ಬೇಗೂರಿನಲ್ಲಿದ್ದ ರಕ್ಕಸಿ ಚೌಡಿಯೊಬ್ಬಳ ಉಪಟಳ ಅಧಿಕವಾಗಿತ್ತು. ಗ್ರಾಮದಲ್ಲಿದ್ದ ಜಂಗಮ ಮಠದ ಗುರುಗಳನ್ನು ರಾಕ್ಷಸಿ ಚೌಡಿಯ ಉಪಟಳದಿಂದ ಜನಜಾನುವಾರುಗಳನ್ನು ರಕ್ಷಿಸಿ ಕಾಪಾಡುವಂತೆ ಭಕ್ತರು ಬೇಡಿಕೊಂಡರು. ಜಂಗಮ ಗುರುಗಳು ಚೌಡಿಯ ಮನಪರಿವರ್ತನೆ ಮಾಡಿ ಲಿಂಗದೀಕ್ಷೆ ಮಾಡಿಸಿದರು’ ಎಂದು ಮಕ್ಕಳ ದೇವರ ಮಠಾಧೀಶರಾದ ಮೃತ್ಯುಂಜಯ ಸ್ವಾಮೀಜಿ ಮಠದ ಪರಂಪರೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಹುಲಿಕಲ್ ಪಾಳೇಪಟ್ಟಿಗೆ ಸೇರಿದ್ದ ಹೊನ್ನಾಪುರ ಗ್ರಾಮದ ಊರುಬಾಗಿಲು ಮುಂದೆ ಇರುವ ಕ್ರಿ.ಶ.1730 ಶಿಲಾಶಾಸನದಲ್ಲಿ ಮೈಸೂರಿನ ದಳವಾಯಿ ನಂಜರಾಜಯ್ಯ ಚೌಡಿಬೇಗೂರಿನಲ್ಲಿದ್ದ ಶ್ರೀಮಠಕ್ಕೆ ಭೂದಾನ ಮಾಡಿ ಮಠದ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ ಎಂದು ಶಾಸನದಲ್ಲಿ ಉಲ್ಲೇಖವಿದೆ. ಚಿತ್ರದುರ್ಗದ ಚಿನ್ಮೂಲಾದ್ರಿ ಮುಗುಘಾಮಠದಲ್ಲಿ ಇಂದಿಗೂ ಶಾಸನದ ಪ್ರತಿಇದೆ. ತಾಮ್ರಶಾಸನ ಸಹ ಇದೆ’ ಎಂದರು.

‘ಚೌಡಿಬೇಗೂರಿನಿಂದ ಕಣ್ಣೂರಿನ ಜಮೀನಿನಲ್ಲಿ ಅಂದಿನ ಜಂಗಮ ಗುರುಗಳು ಮಠವನ್ನು ಸ್ಥಾಪನೆ ಮಾಡಿಕೊಂಡು ಬಸವಾದಿ ಶರಣರ ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯನ್ನು, ಜೀವಪರ ದಯೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇಂದಿಗೂ ಮಠದ ಆವರಣದಲ್ಲಿ 6 ಗುದ್ದುಗೆಗಳಿವೆ. ಮಕ್ಕಳ ದೇವರ ಮಠ, ಬಸವದೇವರ ಮಠ ಇತರೆ ಹೆಸರಿಂದ ಕರೆಯಲಾಗುತ್ತಿದೆ. ಅಂದು ದಳವಾಯಿ ನಂಜರಾಜಯ್ಯ ಶ್ರೀಮಠಕ್ಕೆ ದಾನವಾಗಿ ನೀಡಿದ್ದ ಜಮೀನಿನ ಸುತ್ತಲೂ ಅಂದಿನ ಜಂಗಮರು ಹಾಕಿಸಿದ್ದ ಲಿಂಗಮುದ್ರೆ ಕಲ್ಲುಗಳು ಇಂದಿಗೂ ಇವೆ’ ಎಂದರು.

‘ಕಾಲನಲೀಲೆಗೆ ಸಿಲುಕಿ, ಮಠದ ಪರಂಪರೆಯಲ್ಲಿ ಹಲವು ವರ್ಷಗಳ ಕಾಲ ಶ್ರೀ ಮಠಕ್ಕೆ ಗುರುಗಳಿರಲಿಲ್ಲವಂತೆ. ಸಿದ್ದಗಂಗಾ ಮಠಾಧೀಶರಾಗಿದ್ದ ಶಿವಕುಮಾರ ಸ್ವಾಮೀಜಿ, 64 ಶರಣ ಮಠಗಳ ಮಠಾಧೀಶರ ಸಹಮತದೊಂದಿಗೆ ನಾವೂ ಗುರುಪರಂಪರೆಯಲ್ಲಿ 7ನೇ ಗುರುಗಳಾಗಿ ಸಕಲರಿಗೆ ಲೇಸನ್ನೆ ಬಯಸಿದ್ದ ಶರಣ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ’ ಎಂದು ವಿವರ ನೀಡಿದರು.

‘ಮೈಸೂರಿನ ಯಧುವಂಶೀಯ ಅರಸರು, ಕೆಂಪೇಗೌಡರ ವಂಶಜರು, ಹುಲಿಕಲ್ ಪಾಳೇಗಾರರು ಕಣ್ಣೂರಿನ ಶ್ರೀಮಠಕ್ಕೆ ದಾನದತ್ತಿ ನೀಡಿದ್ದಾರೆ. ಇಂದಿಗೂ ಕಣ್ಣೂರಿನ ಮಕ್ಕಳ ದೇವರ ಮಠದ ಹೊಲದಲ್ಲಿ ಶರಣರು ತಪಗೈದಿದ್ದ ಗುಹೆ, ಯೋಗಮಂಟಪ, ಲಿಂಗಮುದ್ರೆಕಲ್ಲುಗಳ ಮಠದ ಐತಿಹಾಸಿಕ ಸ್ಮಾರಕಗಳಾಗಿವೆ. ಪುರಾತನ ಮಠಕ್ಕೆ ಹೊಸರೂಪ ಕೊಡಲು ಸಿದ್ಧತೆ ನಡೆಸಿದ್ದೇವೆ. ಇದೇ ಸಮಯದಲ್ಲಿ ಗುಹೆ ಮತ್ತು ಪೂಜಾ ಸಾಮಾಗ್ರಿಗಳು ಪತ್ತೆಯಾಗಿರುವುದು ನಮ್ಮ ಮಠದ ಚಾರಿತ್ರಿಕ ಮಹತ್ವಕ್ಕೆ ಸಾಕ್ಷಿಯಾಗಿವೆ. ಪತ್ತೆಯಾಗಿರುವ ಸಾಮಗ್ರಿಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇತಿಹಾಸ ಸಂಶೋಧಕರನ್ನು ಕರೆಸಿ, ಹೆಚ್ಚಿನ ತಲಸ್ಪರ್ಶಿ ಸಂಶೋಧನೆ ಮಾಡಿಸಲಾಗುವುದು. ಪತ್ತೆಯಾಗಿರುವ ತಾಮ್ರ, ಹಿತ್ತಾಳೆ, ಕಂಚುಮುಟ್ಟಿನ ಸಾಮಗ್ರಿಗಳನ್ನು ಸಂರಕ್ಷಿಸಲಾಗುವುದು’ ಎಂದು ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಸಂಸ್ಕೃತ ಶಿಕ್ಷಕ ಕಣ್ಣೂರು ಭೋವಿ ಪಾಳ್ಯದ ರಾಜಣ್ಣ, ಕಣ್ಣೂರಿನ ರಾಜಣ್ಣ ಹಾಗೂ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT