ಶುಕ್ರವಾರ, ಡಿಸೆಂಬರ್ 13, 2019
21 °C

ಅರ್ಥ ಕಳೆದುಕೊಳ್ಳುತ್ತಿರುವ ಸಂಶೋಧನೆಗಳು: ಡಾ.ರಾಜೇಂದ್ರ ಚೆನ್ನಿ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿವಮೊಗ್ಗ: ಪಿಎಚ್‌.ಡಿ ಕೇಂದ್ರಿತ ಮನೋಸ್ಥಿತಿಯ ಪರಿಣಾಮ ವಿಶ್ವವಿದ್ಯಾಲಯಗಳಮಟ್ಟದಲ್ಲಿ ಕೈಗೊಳ್ಳುವ ಸಂಶೋಧನೆಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದು ಮಾನಸ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಾಜೇಂದ್ರ ಚೆನ್ನಿ ವಿಷಾದಿಸಿದರು.

ಕರ್ನಾಟಕ ಸಂಘದ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಇಂಗ್ಲಿಷ್ ಪ್ರಾಧ್ಯಾಪಕರ ವೇದಿಕೆ ‘ಸಮಕಾಲೀನ ಭಾರತೀಯ ಇಂಗ್ಲಿಷ್ ಸಾಹಿತ್ಯ; ದೃಷ್ಟಿಕೋನ ಮತ್ತು ಸಾವಲುಗಳು’ ವಿಷಯ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಸಂಶೋಧನೆ ಕೈಗೊಳ್ಳುವುದೇ ಪಿಎಚ್‌.ಡಿ ಪಡೆಯಲು ಎಂಬ ಮನೋಭಾವ ಬಹುತೇಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರಲ್ಲಿ ಇದೆ. ಇಂತಹ ಮನೋಭಾವ ಸರಿಯಲ್ಲ. ಸಂಶೋಧನೆ ಮುಗಿಸಿ ಡಾಕ್ಟರೇಟ್ ಪಡೆದರೆ ಸಾಲದು. ಸಂಶೋಧನೆಯ ಬರಹ ಸಮಾಜಕ್ಕೆ ಉಪಯುಕ್ತವಾಗಬೇಕು. ಸಂಶೋಧನೆಯ ವಿಷಯಗಳು ಇತರೆ ವಿದ್ಯಾರ್ಥಿಗಳಿಗೆ ಆಕಾರ ಗ್ರಂಥಗಳಾಗಬೇಕು. ಪಿಎಚ್‌.ಡಿ ಪಡೆಯಲು ನಕಲು ಮಾಡುವುದು, ವಾಮಮಾರ್ಗ ಅನುಸರಿಸುವ ಮನೋಭಾವ ತೊರೆಯಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಧ್ಯಾಪಕರು ಪಿಎಚ್‌.ಡಿ ಪಡೆದ ನಂತರವೂ ಓದು, ಬರವಣಿಗೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಎಷ್ಟೋ ಜನರು ಪಿಎಚ್‌.ಡಿ. ಪಡೆದ ನಂತರ ತಮ್ಮ ಬರವಣಿಗೆಯನ್ನೇ ನಿಲ್ಲಿಸಿದ್ದಾರೆ. ಹೊಸ ಕಲಿಕೆ ನಿಲ್ಲಿಸಿದ್ದಾರೆ. ಜಡವಾಗಿಬಿಟ್ಟಿದ್ದಾರೆ. ಕಲಿಕೆ ನಿಂತ ನೀರಾಗಬಾರದು. ಅದು ನಿರಂತರವಾಗಿರಬೇಕು. ಹೊಸ ಹೊಸ ವಿಷಯ ಹುಡುಕಬೇಕು. ಅರ್ಥ ಮಾಡಿಕೊಳ್ಳಬೇಕು. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಜ್ಞಾನವೃದ್ಧಿಸಿಕೊಳ್ಳಬೇಕು. ಹೊಸಹೊಸ ಬೋಧನಾ ಕ್ರಮ ಅನುಸರಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ಆಯುಕ್ತ ಡಾ.ಎಸ್.ಕೆ. ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಇಂಗ್ಲಿಷ್‌ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಉಳಿದ ವಿಷಯಗಳಲ್ಲಿ ಸುಲಭವಾಗಿ ತೇರ್ಗಡೆಯಾಗುವ ಬಹುತೇಕ ವಿದ್ಯಾರ್ಥಿಗಳು ಇಂಗ್ಲಿಷ್‌ ವಿಷಯಗಳಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಅವರ ಪದವಿ ಪೂರ್ಣವಾಗುವುದೇ ಇಲ್ಲ. ಪ್ರಾಧ್ಯಾಪಕರು ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಆಯೋಜಿಸಬೇಕು. ಸುಲಭ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಸೂಚಿಸಿದರು.

ಕೆಲವು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕಬ್ಬಿಣದ ಕಡಲೆ ಎಂದು ಭಾವಿಸಿದ್ದಾರೆ. ಪ್ರಾಧ್ಯಾಪಕರು ತಮ್ಮ ಬೋಧನಾ ಕೌಶಲದ ಮೂಲಕ ಪಾಠಗಳನ್ನು ಅರ್ಥಮಾಡಿಸಬೇಕು. ವಿಷಯದ ಕಡೆ ಹೆಚ್ಚು ಆಕರ್ಷಿತರಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಕುವೆಂಪು ವಿಶ್ವ ವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ.ರಾಚೆಲ್ ಬಾರಿ, ಡಾ.ಚನ್ನಪ್ಪ, ಎಚ್.ಎಲ್. ನಾಗಭೂಷಣ್‌, ದತ್ತಾತ್ರೇಯ, ಎನ್.ಎಸ್. ಗೋವಿಂದ, ಓ. ಸತ್ಯ ನಾರಾಯಣ ರೆಡ್ಡಿ, ರವೀಂದ್ರ ಭಟ್, ಸಿರಾಜ್ ಅಹಮದ್‌ ವಿದ್ಯಾ ಎಂ. ಜೋಸೆಫ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು