ಶುಕ್ರವಾರ, ಜನವರಿ 24, 2020
28 °C
ಅಕ್ರಮ ವಹಿವಾಟಿನ ವಿರುದ್ಧ ಕಠಿಣ ಕ್ರಮ: ಜಿಲ್ಲಾಧಿಕಾರಿ ಶಿವಕುಮಾರ್

ಮರಳು ನಿರ್ವಹಣೆ ನಿಯಮ ಪಾಲಿಸಲು ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಿಯಮ ಉಲ್ಲಂಘಿಸುವ ಮರಳು ಕ್ವಾರಿ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಗಿ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ಎ ಚ್ಚರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮರಳು ಕ್ವಾರಿಗಳ ನಿರ್ವಹಣೆ, ಗಣಿಗಾರಿಕೆ ಪುನರಾರಂಭ ಕುರಿತು ಆಯೋಜಿಸಲಾಗಿದ್ದ ಮರಳು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಮರಳು ಕ್ವಾರಿಗಳ ಸಂಪರ್ಕ ರಸ್ತೆ ದುರಸ್ತಿ ಮಾಡಬೇಕು. ಎಲ್ಲ ಕ್ವಾರಿಗಳಲ್ಲೂ ಸಿ.ಸಿ.ಟಿ.ವಿ. ಕ್ಯಾಮರಾ ಅಳವಡಿಸಬೇಕು. ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತ‍ಪಾಸಣಾ ಕೇಂದ್ರಗಳಲ್ಲಿ ಇಲಾಖೆಯ ಸಿಬ್ಬಂದಿ ನಿಯೋಜಿಸಬೇಕು. ಕ್ವಾರಿ ಮತ್ತು ತಪಾಸಣಾ ಕೇಂದ್ರಗಳ ಸಿ.ಸಿ.ಟಿ.ವಿ ಕ್ಯಾಮೆರಾಗಳ ಚಿತ್ರಿತ ದಾಖಲೆಗಳನ್ನು ವಾರಕ್ಕೆ ಒಮ್ಮೆ ಸಮೀಪದ ಪೊಲೀಸ್ ಠಾಣೆಗೆ ತಲುಪಿಸಬೇಕು ಎಂದು ಸೂಚಿಸಿದರು.

ಉಪ ವಿಭಾಗಾಧಿಕಾರಿಗಳು ತಹಶೀಲ್ದಾರ್ ಒಳಗೊಂಡ ತಾಲ್ಲೂಕುಮಟ್ಟದ ಸಮಿತಿಗಳನ್ನು ರಚಿಸಬೇಕು. ಪ್ರತಿ ತಿಂಗಳು ಸಭೆ ನಡೆಸಬೇಕು. ಮರಳು ವಿತರಣೆ ಕುರಿತು ಸಮಾಲೋಚನೆ ನಡೆಸಬೇಕು. ಪರವಾನಗಿ ಅವಧಿ ಪೂರ್ಣಗೊಂಡಿರುವ ಕ್ವಾರಿಗಳ ಮರು ಟೆಂಡರ್ ಕರೆಯಬೇಕು. ತೀರ್ಥಹಳ್ಳಿಯ ಸಿಬ್ಬಲುಗುಡ್ಡೆ ಕ್ವಾರಿಗೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಭೇಟಿ ನೀಡಿ ಪರಿಶೀಲಿಸಬೇಕು. ವರದಿ ನೀಡಿದ ನಂತರ ಕ್ವಾರಿ ಆರಂಭಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.

ಶಿವಮೊಗ್ಗ ತಾಲ್ಲೂಕಿನ ಕೂಡ್ಲಿಯ ಮರಳು ಕ್ವಾರಿ ರದ್ದುಪಡಿಸುವಂತೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ. ಉಪ ವಿಭಾಗಾಧಿಕಾರಿ ಸ್ಥಳ ಪರಿಶೀಲನೆ ನಡೆಸಬೇಕು. ಮರಳು ಸಾಗಣೆ ಮಾಡುವ ಲಾರಿಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ಅಳವಡಿಸಬೇಕು. ಅಕ್ರಮವಾಗಿ ಮರಳು ಸಾಗಿಸುವ ಟ್ರ್ಯಾಕ್ಟರ್ ಮತ್ತು ಲಾರಿಗಳಿಗೆ ಮರಳಿನ ಮೌಲ್ಯದ ಐದು ಪಟ್ಟು ಹೆಚ್ಚು ದಂಡ ವಿಧಿಸಬೇಕು. ಮೊಕದ್ದಮೆ ದಾಖಲಿಸಬೇಕು ಎಂದು ತಾಕೀತು ಮಾಡಿದರು.

ಪ್ರಸ್ತುತ ಸರ್ಕಾರದ ಕಟ್ಟಡ ನಿರ್ಮಾಣ, ದುರಸ್ತಿಗೆ ಪ್ರತ್ಯೇಕ ಕ್ವಾರಿ ಗುರುತಿಸಲಾಗಿದೆ. ಅಲ್ಲಿಂದಲೇ ಮರಳು ಪಡೆಯಲು ಸೂಚಿಸಲಾಗಿದೆ. ಯಾವುದೇ ಕಟ್ಟಡ ನಿರ್ಮಾಣಕ್ಕೆ ಮರಳಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಸಬೂಬು ಹೇಳಬಾರದು. ಮರಳು ಸಾಗಿಸುವವರು ಸಂಗ್ರಹಣಾ ಸ್ಥಳ, ರಸ್ತೆ ಮಾರ್ಗ, ಪರವಾನಗಿ ದಿನ, ಸಮಯ ಹಾಗೂ ಕ್ವಾರಿಯಲ್ಲಿ ಸಿ.ಸಿ.ಟಿ.ವಿ. ಕ್ಯಾಮರಾ ಅಳವಡಿಕೆ ದಾಖಲೆಗಳನ್ನು ಹೊಂದಿರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ನಾಗರಾಜ್, ಹಿರಿಯ ಭೂವಿಜ್ಞಾನಿ ರಶ್ಮಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)