ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರದಲ್ಲಿ ಅತಿವೃಷ್ಟಿಯಿಂದ ₹ 136.68 ಕೋಟಿ ನಷ್ಟ

ತಾಲ್ಲೂಕಿನಲ್ಲಿ ಮಳೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ
Last Updated 8 ಆಗಸ್ಟ್ 2021, 3:16 IST
ಅಕ್ಷರ ಗಾತ್ರ

ಸಾಗರ: ಜೂನ್‌ನಿಂದ ಈವರೆಗೆ ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ₹ 136.68 ಕೋಟಿ ನಷ್ಟ ಉಂಟಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ನಗರದ ಗಾಂಧಿ ಮೈದಾನದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ, ಚರಂಡಿ, ಸೇತುವೆ ಸೇರಿ ಒಟ್ಟು ₹ 45.93 ಕೋಟಿ, ಜಿಲ್ಲಾ ಪಂಚಾಯಿತಿ ಇಲಾಖೆಗೆ ಸೇರಿದ ಕಾಮಗಾರಿಗಳಿಗೆ ₹ 32.86 ಕೋಟಿ, ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕಾಮಗಾರಿಗಳಿಗೆ ₹ 26.90 ಕೋಟಿ, ಪಿಎಂಜಿಎಸ್‌ವೈಗೆ ಸೇರಿದ ಕಾಮಗಾರಿಗಳಿಗೆ ₹ 3 ಕೋಟಿ ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಿದರು.

ಶಾಲಾ ಕೊಠಡಿ, ಅಕ್ಷರ ದಾಸೋಹ ಕೊಠಡಿ, ಶೌಚಾಲಯ, ಕಾಂಪೌಂಡ್, ಬಾವಿಗೆ ಉಂಟಾದ ಹಾನಿಯಿಂದ ₹ 15.20 ಕೋಟಿ, ಶಿಶು ಅಭಿವೃದ್ಧಿ ಇಲಾಖೆಗೆ ಸೇರಿದ ಕಟ್ಟಡಗಳ ಹಾನಿಯಿಂದ ₹ 1.68 ಕೋಟಿ, ಭತ್ತ ಹಾಗೂ ಜೋಳದ ಬೆಳೆಗಳಿಗೆ ಉಂಟಾದ ಹಾನಿಯಿಂದ ₹77 ಲಕ್ಷ, ತೋಟಗಾರಿಕಾ ಬೆಳೆಗಳಾದ ಅಡಿಕೆ, ಶುಂಠಿಗೆ ಉಂಟಾದ ಹಾನಿಯಿಂದ ₹ 15.68 ಲಕ್ಷ ನಷ್ಟ ಸಂಭವಿಸಿದೆ ಎಂದು ತಿಳಿಸಿದರು.

ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ, ವಿದ್ಯುತ್ ತಂತಿಗಳ ಹಾನಿಯಿಂದ ₹ 1.68 ಕೋಟಿ, ಗ್ರಾಮೀಣ ಭಾಗದಲ್ಲಿ 31 ಮನೆಗಳಿಗೆ ಸಂಭವಿಸಿದ ಹಾನಿಯಿಂದ ₹ 39.55 ಲಕ್ಷ, ನಗರವ್ಯಾಪ್ತಿಯಲ್ಲಿ ಕಟ್ಟಡಗಳು, ರಸ್ತೆ, ತಡೆಗೋಡೆಗಳಿಗೆ ಉಂಟಾದ ಹಾನಿಯಿಂದ ₹ 5.50 ಕೋಟಿ, ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ, ರಸ್ತೆಗೆ ಉಂಟಾದ ಹಾನಿಯಿಂದ ₹ 2.65 ಕೋಟಿ ನಷ್ಟ ಸಂಭವಿಸಿದೆ ಎಂದು ವಿವರಿಸಿದರು.

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿರುವಂತೆ ಎಲ್ಲಾ ಜಿಲ್ಲೆಯ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡುತ್ತಿದ್ದಾರೆ. ತಕ್ಷಣದ ಪರಿಹಾರ ಹಾಗೂ ಶಾಶ್ವತ ಪರಿಹಾರ ಎಂಬ ಎರಡು ನೆಲೆಗಳಲ್ಲಿ ಸಂತ್ರಸ್ತರಿಗೆ ನೆರವು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

ಸಂಪೂರ್ಣವಾಗಿ ಮನೆ ಕುಸಿತ ಉಂಟಾಗಿದ್ದಲ್ಲಿ ಸಂತ್ರಸ್ತರಿಗೆ ₹ 5 ಲಕ್ಷ ಪರಿಹಾರ ನೀಡಲಾಗುವುದು. ತಕ್ಷಣಕ್ಕೆ ಸಂತ್ರಸ್ತರ ಬ್ಯಾಂಕ್ ಖಾತೆಗೆ ₹ 96 ಸಾವಿರ ಜಮಾ ಮಾಡಲಾಗುವುದು. ವಾರದೊಳಗೆ ಉಳಿದ ಮೊತ್ತವನ್ನು ಪಾವತಿಸಲಾಗುವುದು ಎಂದರು.

ವಿವಿಧ ಇಲಾಖೆಯ ಅಧಿಕಾರಿಗಳು ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಕುರಿತು ಚುರುಕಾಗಿ ಸರ್ವೆ ನಡೆಸಿ ಶೀಘ್ರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಚುನಾಯಿತ ಪ್ರತಿನಿಧಿಗಳು ಆಯಾ ಭಾಗದಲ್ಲಿ ಸಂಭವಿಸಿರುವ ನಷ್ಟದ ವಿವರಗಳನ್ನು ಅಧಿಕಾರಿಗಳ ಗಮನಕ್ಕೆ ತರಬೇಕು. ಹಾನಿಯ ಕುರಿತು ಈಗ ತಯಾರಿಸಿರುವ ಪಟ್ಟಿ ತಾತ್ಕಾಲಿಕವಾಗಿದ್ದು ನಷ್ಟದ ಬಾಬ್ತು ಇದೇ ಅಂತಿಮ ಎಂದು ಭಾವಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕ ಎಚ್. ಹಾಲಪ್ಪ ಹರತಾಳು, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ಎಲ್., ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ತಾಲ್ಲೂಕು ಅಧ್ಯಕ್ಷ ಲೋಕನಾಥ ಬಿಳಿಸಿರಿ, ನಗರ ಘಟಕದ ಅಧ್ಯಕ್ಷಕೆ.ಆರ್. ಗಣೇಶ್ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT