ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಎರಡೂವರೆ ವರ್ಷದಲ್ಲಿ 155 ಬಾಲ್ಯ ವಿವಾಹ

ಬಾಲೆಯರಿಗೆ ಬಲವಂತದಿಂದ ಮದುವೆ
ಮಲ್ಲಪ್ಪ ಸಂಕೀನ್‌
Published 3 ಜೂನ್ 2024, 7:38 IST
Last Updated 3 ಜೂನ್ 2024, 7:38 IST
ಅಕ್ಷರ ಗಾತ್ರ

ಶಿವಮೊಗ್ಗ: ಬಾಲ್ಯ ವಿವಾಹ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿವೆ. ಎರಡೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಒಟ್ಟು 155 ಬಾಲ್ಯವಿವಾಹಗಳು ನಡೆದಿವೆ. ಅದರಲ್ಲಿಯೂ ಈ ವರ್ಷ 35 ಬಾಲ್ಯ ವಿವಾಹಗಳು ನಡೆದಿವೆ. 

ಅನಕ್ಷರತೆ, ಬಡತನ, ಪ್ರೇಮ ಪ್ರಕರಣ, ಪ್ರೌಢಶಾಲೆಯಲ್ಲಿ ಅನುತ್ತೀರ್ಣ, ತಂದೆ–ತಾಯಿಯ ಅನಾರೋಗ್ಯ ಸೇರಿ ಹಲವು ಕಾರಣಗಳಿಂದ ಬಾಲ್ಯವಿವಾಹಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಈ ಸಂಖ್ಯೆ ಹೆಚ್ಚಿದ್ದು, 13ರಿಂದ 17 ವರ್ಷದ ಬಾಲಕಿಯರು ಈ ಸುಳಿಯಲ್ಲಿ ಸಿಲುಕುತ್ತಿದ್ದಾರೆ.

ಜಿಲ್ಲೆಯಲ್ಲಿ 2022ರಲ್ಲಿ 54 ಬಾಲ್ಯವಿವಾಹಗಳು ನಡೆದಿದ್ದು, ಈ ಪೈಕಿ 26 ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಲ್ಲಿ ಕೆಲವರಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಕೂಡ ಆಗಿದೆ. ಇನ್ನೂ ಕೆಲವರು ಖುಲಾಸೆಗೊಂಡಿದ್ದಾರೆ. 28 ಪ್ರಕರಣಗಳ ತನಿಖೆ ನಡೆಯುತ್ತಿದೆ. 2023ರಲ್ಲಿ 66 ಬಾಲ್ಯವಿವಾಹಗಳು ಆಗಿವೆ. ಇದರಲ್ಲಿ 11 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ. ಕೆಲವರಿಗೆ ಶಿಕ್ಷೆಯಾಗಿದೆ. ಇನ್ನೂ ಕೆಲವರು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. 

ಕಳೆದ ಎರಡು ವರ್ಷಗಳಿಗೆ ಹೋಲಿಸಿದಲ್ಲಿ 2024 ಆರಂಭದ 5 ತಿಂಗಳಲ್ಲಿಯೇ 35 ಬಾಲ್ಯವಿವಾಹಗಳು ಜರುಗಿವೆ. ಎಲ್ಲ ಪ್ರಕರಣಗಳು ತನಿಖಾ ಹಂತದಲ್ಲಿವೆ. 

ಭದ್ರಾವತಿ ಮತ್ತು ಶಿಕಾರಿಪುರ ತಾಲ್ಲೂಕು ವ್ಯಾಪ್ತಿ ಹಾಗೂ ಶಿವಮೊಗ್ಗ ನಗರ ಪ್ರದೇಶದಲ್ಲಿ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿವೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಬೇರೆ ಬೇರೆ ಊರುಗಳಲ್ಲಿ ಬಾಲ್ಯವಿವಾಹ ಮಾಡಲಾಗುತ್ತಿದೆ. ಬಹಳಷ್ಟು ಬಾಲ್ಯವಿವಾಹಗಳು ಮುಂಜಾನೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ. ವಿಷಯ ತಿಳಿದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನಿನಡಿ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. 

ಪಾಲಕರು ಮತ್ತು ಪೋಷಕರು ತಮ್ಮ ಇಚ್ಛಾಶಕ್ತಿಗೆ ಅನುಸಾರವಾಗಿ ಎಳೆಯ ಮಕ್ಕಳಿಗೆ ಮದುವೆ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಜೀವನದಲ್ಲಿ ಸಾಧನೆ ಮಾಡಬೇಕಾದ ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಸಂಸಾರ ನಡೆಸುವಂತಾಗಿದೆ. ಮಕ್ಕಳ ಆಸೆ ಆಕಾಂಕ್ಷೆಗಳು ಕಮರಿ ಹೋಗುತ್ತಿವೆ. ಕಾನೂನು ಇನ್ನಷ್ಟು ಬಿಗಿಯಾಗಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಬಿಸಿಯೂಟ ನೌಕರರ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ಹನುಮಮ್ಮ ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಶಾಲಾ ಕಾಲೇಜು ಮತ್ತು ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬಾಲ್ಯ ವಿವಾಹ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಾಲಕರಿಗೂ ಅರಿವು ಮೂಡಿಸಲಾಗುತ್ತಿದೆ. ಆದರೂ ಪಾಲಕರು ತಿಳಿದುಕೊಳ್ಳುತ್ತಿಲ್ಲ. ಸಮಸ್ಯೆ ಪರಿಹಾರ ತಲೆನೋವಾಗಿ ಪರಿಣಮಿಸಿದೆ. ಅಧಿಕಾರಿಗಳ ಕೆಲಸಕ್ಕೆ ಪಾಲಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್‌.ಮಂಜುನಾಥ ಮನವಿ ಮಾಡಿದರು.

ಅನಕ್ಷರತೆ ಮತ್ತು ಬಡತನದಿಂದಾಗಿ ಕೆಲವರು ಬಾಲ್ಯವಿವಾಹ ಮಾಡುತ್ತಿದ್ದಾರೆ. ಬಾಲ್ಯವಿವಾಹ ತಡೆಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ.
ಆರ್‌.ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT