ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮತದಾರರ ಸೆಳೆಯಲು ಭರ್ಜರಿ ಕಸರತ್ತು

ಟಿಕೆಟ್‌ ಆಕಾಂಕ್ಷೆ: ಕಬಡ್ಡಿ, ಕ್ರಿಕೆಟ್, ಜನ್ಮದಿನ, ಪ್ರವಾಸ, ಜಾತ್ರೆಗಳೇ ವೇದಿಕೆ
Last Updated 7 ಮಾರ್ಚ್ 2023, 10:37 IST
ಅಕ್ಷರ ಗಾತ್ರ

ಶಿವಮೊಗ್ಗ: ಮತದಾನಕ್ಕೆ ದಿನಾಂಕ ನಿಗದಿ ಆಗಿ ನೀತಿ–ಸಂಹಿತೆ ಜಾರಿಗೆ ಮುನ್ನವೇ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ.

ದೇವಸ್ಥಾನಗಳಿಗೆ ದೇಣಿಗೆ, ಧಾರ್ಮಿಕ ಕಾರ್ಯಕ್ರಮ, ಜನ್ಮದಿನ, ಕ್ರಿಕೆಟ್, ಕಬಡ್ಡಿ ಟೂರ್ನಿ, ಪ್ರವಾಸ, ಹಬ್ಬ, ಜಾತ್ರೆಗಳು ಜನರ ಗಮನ ಸೆಳೆಯಲು ರಾಜಕೀಯ ಮುಖಂಡರಿಗೆ ವೇದಿಕೆ ಒದಗಿಸಿವೆ. ನೀತಿ–ಸಂಹಿತೆ ಜಾರಿ ಆದಲ್ಲಿ ಖರ್ಚು ಮಾಡುವ ಪ್ರತಿ ಪೈಸೆಗೂ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಡಬೇಕಿದೆ. ಹೀಗಾಗಿ ಚುನಾವಣೆ ಘೋಷಣೆ ಮುನ್ನವೇ ಮತ ಬ್ಯಾಂಕ್ ಭದ್ರಗೊಳಿಸಿಕೊಳ್ಳಲು ಪೈಪೋಟಿ ಕಾಣಸಿಗುತ್ತಿದೆ.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯೊಬ್ಬರು ಹಲವು ದೇವಸ್ಥಾನ, ಸಮುದಾಯ ಭವನಗಳಿಗೆ ₹50 ಸಾವಿರದಿಂದ ₹1 ಲಕ್ಷದವರೆಗೆ ದೇಣಿಗೆ ಕೊಟ್ಟಿದ್ದಾರೆ. ಹಾಲಿ ಅಧಿಕಾರದಲ್ಲಿರುವ ಜನಪ್ರತಿನಿಧಿಯೊಬ್ಬರು ಬೇರೆ ಬೇರೆ ಇಲಾಖೆಗಳಿಂದ ₹5ರಿಂದ ₹15 ಲಕ್ಷ ಅನುದಾನ ಘೋಷಣೆ ಮಾಡಿಸಿ ಪತ್ರ ಕೊಡಿಸಿದ್ದಾರೆ.

ಸೂಗೂರು, ಪುರದಾಳದಲ್ಲಿ ಕಬಡ್ಡಿ ಟೂರ್ನಿಗೆ ಹಾಲಿ ಶಾಸಕರು ದೇಣಿಗೆ ನೀಡಿದ್ದರೆ, ಇಟ್ಟಿಗೆಹಳ್ಳಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ನಾರಾಯಣಸ್ವಾಮಿ ಕಬಡ್ಡಿ ಆಡಿಸಿದ್ದಾರೆ. ದೇವಕಾತಿಕೊಪ್ಪದಲ್ಲಿ ಕ್ರಿಕೆಟ್‌ ಟೂರ್ನಿಗೆ ನೆರವಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಮೂರು ದಿನಗಳ ಕ್ರಿಕೆಟ್ ಟೂರ್ನಿ ನಡೆಸಿದ್ದು, ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ಶಿಕಾರಿಪುರ ಕ್ಷೇತ್ರದಲ್ಲಿ ಸೀರೆ, ಸಿಹಿ ವಿತರಣೆ ಆಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲೂ ಶಾಸಕರ ಹುಟ್ಟುಹಬ್ಬಕ್ಕೆ ಒಂದು ಸಾವಿರ ಹೆಣ್ಣುಮಕ್ಕಳಿಗೆ ಸೀರೆ ಕೊಡುಗೆ ನೀಡಲಾಗಿದೆ. ಗಾಜನೂರು ಬಳಿಯ ರೆಸಾರ್ಟ್‌ನಲ್ಲಿ ಅಧಿಕಾರಿಗಳಿಗೆ ಔತಣಕೂಟ ನಡೆದಿದೆ. ಶಾಸಕ ಕೆ.ಎಸ್‌.ಈಶ್ವರಪ್ಪ ನೆರವಿನಿಂದ ಮಾರಿಕಾಂಬ ಸ್ವ–ಸಹಾಯ ಸಂಘದ ಸಾವಿರಾರು ಸದಸ್ಯರು ಪ್ರವಾಸ ಮುಗಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಡಾ.ಧನಂಜಯ ಸರ್ಜಿ, ಎಸ್‌.ಎಸ್‌.ಜ್ಯೋತಿಪ್ರಕಾಶ್ ಶಿವರಾತ್ರಿಯ ದಿನ ಭಕ್ತರಿಗೆ ರುದ್ರಾಕ್ಷಿ ವಿತರಣೆ ಮಾಡಿದ್ದಾರೆ. ಸರ್ಜಿ ಆರೋಗ್ಯ ಶಿಬಿರ ನಡೆಸಿದ್ದಾರೆ.

ಭರ್ಜರಿ ಬಾಡೂಟ: ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬೇಳೂರು ಗೋಪಾಲಕೃಷ್ಣ ಅವರು ಊರ ಹಬ್ಬದಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಸೇರಿಸಿ 15 ಸಾವಿರಕ್ಕೂ ಹೆಚ್ಚು ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಮಾಜಿ ಶಾಸಕರು ಇದಕ್ಕಾಗಿ ₹18 ಲಕ್ಷ ಖರ್ಚು ಮಾಡಿದ್ದಾರೆ ಎಂದು ಬೆಂಬಲಿಗರು ಚರ್ಚಿಸಿದ್ದಾರೆ. ಶಾಸಕ ಹರತಾಳು ಹಾಲಪ್ಪ ಸಾಗರದಲ್ಲಿ ಕೆರೆಹಬ್ಬ, ಹೊಸನಗರ ಭಾಗದಲ್ಲಿ ಶರಾವತಿ ಹಬ್ಬ ಮಾಡಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯದ ವಿಡಿಯೊ ಪ್ರದರ್ಶಿಸಿ ಜನರ ಗಮನ ಸೆಳೆದಿದ್ದಾರೆ. ಭದ್ರಾವತಿಯಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆಯ ವೇಳೆ ಊಟ ಹಾಕಲಾಗಿದೆ. ಶಾಸಕ ಬಿ.ಕೆ.ಸಂಗಮೇಶ್ವರ ಹುಟ್ಟುಹಬ್ಬ ಆಚರಣೆಯೂ ಚುನಾವಣೆ ಸಿದ್ಧತೆಗೆ ವೇದಿಕೆ ನೀಡಿದೆ.

ಅನುದಾನದ ಭರವಸೆ: ಪ್ರತಿಭಟನೆ ಹಿಂದಕ್ಕೆ

ಸಾಗರ–ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಸಂಪರ್ಕ ಕಲ್ಪಿಸುವ ಎರಡು ಗ್ರಾಮಗಳ ನಡುವಿನ ರಸ್ತೆ ಬಹಳಷ್ಟು ಹದಗೆಟ್ಟಿದೆ. ಅದನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಸ್ಥಳೀಯರು ವಾರದ ಹಿಂದೆ ಪ್ರತಿಭಟನೆಗೆ ಸಜ್ಜಾಗಿದ್ದರು. ಫ್ಲೆಕ್ಸ್, ಬ್ಯಾನರ್ ಕೂಡ ಸಿದ್ಧಪಡಿಸಿದ್ದರು. ಕೊನೆಯ ಗಳಿಗೆಯಲ್ಲಿ ಪ್ರತಿಭಟನೆ ರದ್ದುಗೊಂಡಿತು. ದೇವಸ್ಥಾನ ಹಾಗೂ ಸಮುದಾಯ ಭವನಕ್ಕೆ ಶಾಸಕರು ಅನುದಾನ ಕೊಡಿಸಲು ಮುಂದಾಗಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು ಎಂಬ ಮಾತು ಸ್ಥಳೀಯವಾಗಿ ಕೇಳಿಬಂದಿತು.

ಮತ ಬರುವ ಖಾತರಿ ಇಲ್ಲ

ಜನರ ಬಳಿ ಹೋಗಲು ಆಕಾಂಕ್ಷಿಗಳಿಗೆ ಬೇರೆ ಮುಖ ಇಲ್ಲ. ಕಬಡ್ಡಿ, ಕ್ರಿಕೆಟ್ ಟೂರ್ನಿಯ ನೆಪದಲ್ಲಿ ಜನರ ಮಧ್ಯೆ ಅವರ ಹೆಸರು ಇರುವಂತೆ ನೋಡಿಕೊಳ್ಳಲು ಇದನ್ನು ಮಾಡುತ್ತಿದ್ದಾರೆ. ಜನರ ಸಂಪರ್ಕಕ್ಕೆ ಇದು ವೇದಿಕೆ ಒದಗಿಸಿದರೂ ಮತ ಬರಲಿದೆ ಎಂಬ ಖಾತರಿ ಇರೊಲ್ಲ ಎಂದು ಸಾಗರದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT