ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನವಟ್ಟಿ: ಅವಳಿ ಕೆರೆ ರಾಜ್ಯ ಹೆದ್ದಾರಿ ಮೇಲೆ ತ್ಯಾಜ್ಯದ ರಾಶಿ

ಪಾದಚಾರಿಗಳು ಮೂಗು ಹಿಡಿದೇ ನಡೆದಾಡುವ ಸ್ಥಿತಿ; ಪ.ಪಂ. ಆದೇಶಕ್ಕೆ ಕವಡೆ ಕಾಸಿನ ಬೆಲೆ ಇಲ್ಲ
Last Updated 21 ಆಗಸ್ಟ್ 2021, 2:21 IST
ಅಕ್ಷರ ಗಾತ್ರ

ಆನವಟ್ಟಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ತಾಲ್ಲೂಕಿನ ದೊಡ್ಡ ಕೆರೆ ಕುಬಟೂರಿನ ಕೆರೆ ಹಾಗೂ ಆನವಟ್ಟಿಯ ತಾವರೆ ಕೆರೆಗಳ ಮಧ್ಯೆ ಹಾದು ಹೊಗಿರುವ ರಾಜ್ಯ ಹೆದ್ದಾರಿ ಮೇಲೆ ವ್ಯಾಪಾರಿಗಳು ನಿತ್ಯ ಕಸದ ರಾಶಿ ಸುರಿಯುತ್ತಿದ್ದು, ಕೆರೆಗಳ ಸ್ವಚ್ಛತೆ ಜೊತೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಈ ಪ್ರದೇಶ ಸಾಂಕ್ರಾಮಿಕ ಕಾಯಿಲೆ ಹರಡುವ ತಾಣವಾಗುತ್ತಿದೆ ಎಂದು ಗ್ರಾಮಸ್ಥರು ಆಂತಕ ಪಡುವಂತಾಗಿದೆ.

ಪಾನಿಪುರಿ, ಗೋಬಿ ಮಂಚೂರಿ ಸೇರಿ ಬೀದಿ ಬದಿಯ ವ್ಯಾಪಾರಿಗಳು ಪ್ಲಾಸ್ಟಿಕ್ ಹಾಗೂ ಪೇಪರ್‌ನಿಂದ ತಯಾರಿಸಿರುವ ತಟ್ಟೆಗಳನ್ನು ಹೇರಳವಾಗಿ ರಾತ್ರಿ ವೇಳೆ ಕೆರೆಗಳ ಏರಿ ಮೇಲೆ ಸುರಿಯುತ್ತಿದ್ದಾರೆ.

‘ಕಟಿಂಗ್ ಶಾಪ್‍ನಲ್ಲಿ ಕತ್ತರಿಸಿರುವ ಕೂದಲು, ಮಾಂಸದಂಗಡಿ ಹಾಗೂ ಚಿಕನ್ ಸ್ಟಾಲ್‍ನವರು ಕೋಳಿ ಪುಕ್ಕ ಹಾಗೂ ತ್ಯಾಜ್ಯ, ಹೋಟೆಲ್ ತ್ಯಾಜ್ಯ, ಮದ್ಯದಂಗಡಿಗಳಮಧ್ಯದ ಬಾಟಲ್‍ಗಳು ಹಾಗೂ ಪ್ಯಾಕೆಟ್‍ಗಳು ಮುಂತಾದ ತ್ಯಾಜ್ಯಗಳನ್ನು ಅವಳಿ ಕೆರೆಗಳ ಏರಿ ಮೇಲೆ ರಾಶಿ– ರಾಶಿಯಾಗಿ ಸುರಿಯುತ್ತಿದ್ದು,ಹಂದಿ, ನಾಯಿಗಳು ಕಸದ ಮೂಟೆಗಳನ್ನು ಎಳೆದಾಡಿ ಹೆದ್ದಾರಿಯ ಮಧ್ಯಕ್ಕೆ ಹಾಕುತ್ತಿವೆ. ಇದರಿಂದ ಪಾದಚಾರಿಗಳು ಮೂಗು ಹಿಡಿದೇ ಓಡಾಡುವಂತಾಗಿದೆ’ ಎನ್ನುತ್ತಾರೆ ಕೋಟಿಪುರ ಗ್ರಾಮದ ನಿವಾಸಿ ವೇದಮೂರ್ತಿ.

ಕೆಲವು ತಿಂಗಳ ಹಿಂದೆ ‘ಪ್ರಜಾವಾಣಿ’ ಕಸದ ರಾಶಿ ಹಾಕುವ ಬಗ್ಗೆ ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಪಟ್ಟಣ ಪಂಚಾಯಿತಿಯವರು ಕೆರೆ ಮೇಲಿನ ಕಸದ ರಾಶಿ ಸ್ವಚ್ಛಮಾಡಿ, ‘ಇಲ್ಲಿ ಯಾರೂ ಕಸ ಹಾಕಬಾರದು, ಕಸ ಹಾಕಿದರೆ ಕಾನೂನು ರೀತಿ ದಂಡ ಹಾಕಲಾಗುವುದು’ ಎಂದು ಎರಡು ನಾಮಫಲಕ ಹಾಕಿದ್ದರು.

ಆದರೆ, ವಿಪರ್ಯಾಸ ಎಂದರೆ ಆ ನಾಮಫಲಕಗಳ ಕೆಳಗೆ ಕಸದ ರಾಶಿ ಹಾಕಿ ಹೋಗುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ಮಿಲ್ಟ್ರಿ ಹೋಟೆಲ್ ಹಾಗೂ ಡಾಬಾ ಮಾಲೀಕರು, ಕಟಿಂಗ್ ಶಾಪ್, ಮದ್ಯದಂಗಡಿ ಸೇರಿ ವಿವಿಧ ವ್ಯಾಪಾರಸ್ಥರು ಪಟ್ಟಣ ಪಂಚಾಯಿತಿ ಆದೇಶಕ್ಕೆ ಕವಡೆ ಕಾಸಿನ ಬೆಲೆಯನ್ನು ನೀಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

‘ಪಟ್ಟಣದಲ್ಲಿರುವ ಹೋಟೆಲ್ ಹಾಗೂ ಮನೆಗಳ ಕೊಳಚೆ ನೀರು ಕುಬಟೂರಿನ ಕೆರೆಯ ಪಕ್ಕದ ಗುಂಡಿಯಲ್ಲಿ ಸಂಗ್ರಹವಾಗುತ್ತಿದ್ದು, ಗುಂಡಿ ತುಂಬಿದ ನಂತರ ದೊಡ್ಡ ಕೆರೆಗೆ ಸೇರುವ ಮೂಲಕ ಕೆರೆ ಮಲಿನಗೊಳ್ಳುತ್ತಿದೆ. ಗ್ರಾಮದ ಜಾನುವಾರು ಈ ಕೆರೆಯ ನೀರು ಕುಡಿಯುತ್ತವೆ ಮತ್ತು ಸಾರ್ವಜನಿಕರು ಈ ಕೆರೆಯ ಮೀನುಗಳನ್ನುಆಹಾರಕ್ಕೆ ಬಳಸುತ್ತಿದ್ದು, ಕೆರೆ ಮಲಿನವಾಗದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ತಿಮ್ಮಾಪುರ ಗ್ರಾಮದ ನಿವಾಸಿ ನಾಗೇಂದ್ರಪ್ಪ ಆಗ್ರಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT