ಸೋಮವಾರ, ಜನವರಿ 24, 2022
21 °C
ಜೆಸಿಬಿ ಯಂತ್ರದ ಮೂಲಕ ಅವೈಜ್ಞಾನಿಕ ಹಂಪ್‌ಗಳ ತೆರವುಗೊಳಿಸಿದ ಪೊಲೀಸರು

ಬೈಕ್ ಸವಾರ ಸಾವು: ಸಂಬಂಧಿಕರಿಂದ ಹೆದ್ದಾರಿ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ತಾಲ್ಲೂಕಿನ ನಂದಿಹಳ್ಳಿ ಕ್ರಾಸ್ ಸಮೀಪ ಇರುವ ಶಾಹಿ ಗಾರ್ಮೆಂಟ್ಸ್ ಎದುರು ಶುಕ್ರವಾರ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ನಂದಿಹಳ್ಳಿ ಗ್ರಾಮದ ಸಂತೋಷ್ (31) ಮೃತಪಟ್ಟವರು. ಮತ್ತೊಬ್ಬ ಸವಾರ ಪವನ್‌ (20)ಅವರಿಗೆ ತೀವ್ರ  ಗಾಯಗಳಾಗಿದ್ದು

ಶಿಕಾರಿಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಡಿಕ್ಕಿ ಹೊಡೆದ ವಾಹನ ಸವಾರ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.

ಪ್ರತಿಭಟನೆ: ಅಪಘಾತ ಸಂಭವಿಸಲು ಶಾಹಿ ಗಾರ್ಮೇಂಟ್ಸ್ ಸಿಬ್ಬಂದಿ ಹಾಕಿರುವ ಅವೈಜ್ಞಾನಿಕ ಹಂಪ್ ಕಾರಣ ಎಂದು ಆರೋಪಿಸಿ ಮೃತ ಯುವಕನ ಸಂಬಂಧಿಕರು ಹಾಗೂ ಸ್ನೇಹಿತರು ಯುವಕನ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸದೇ ಹೆದ್ದಾರಿ ತಡೆ ನಡೆಸಿದರು. ಇದರಿಂದ ಬಹು ಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಕಾರರು, ‘ಶಾಹಿ ಗಾರ್ಮೆಂಟ್ಸ್‌ ನಿರ್ಮಿಸಿರುವ ಅವೈಜ್ಞಾನಿಕ ಹಂಪ್‌ನಿಂದಾಗಿ ಹಲವು ಅಪಘಾತಗಳು ನಡೆದಿವೆ. ಹಲವು ಬೈಕ್ ಸವಾರರು ಮೃತ ಪಟ್ಟಿದ್ದಾರೆ. ಅಪಘಾತಗಳು ನಡೆದರೂ ಅವೈಜ್ಞಾನಿಕ ಹಂಪ್ ತೆರವುಗೊಳಿಸಿಲ್ಲ. ಗಾರ್ಮೆಂಟ್ಸ್‌ ನೌಕರರನ್ನು ಕರೆತರುವ ವಾಹನಗಳು ರಸ್ತೆ ಬದಿಯಲ್ಲಿಯೇ ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಅವೈಜ್ಞಾನಿಕ ಹಂಪ್ ತೆರವುಗೊಳಿಸಬೇಕು. ವಾಹನಗಳನ್ನು ರಸ್ತೆ ಬಿಟ್ಟು ಪಕ್ಕದ ಪ್ರದೇಶದಲ್ಲಿ ನಿಲುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಸಿಪಿಐ ಜೆ. ಲಕ್ಷ್ಮಣ್, ಹಂಪ್ ತೆರವುಗೊಳಿಸಿ ಬ್ಯಾರಿಕೇಡ್ ಅಳವಡಿಸುವುದಾಗಿ ತಿಳಿಸಿದರು. ನಂತರ ಪ್ರತಿಭಟನೆ ಕೈಬಿಟ್ಟು ಯುವಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಶನಿವಾರ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಹೆದ್ದಾರಿಯಲ್ಲಿ ನಿರ್ಮಿಸಿದ ಅವೈಜ್ಞಾನಿಕ ಹಂಪ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು. ಗಾರ್ಮೆಂಟ್ಸ್‌ ನೌಕರರನ್ನು ಕರೆತರುವ ವಾಹನಗಳನ್ನು ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸುವಂತೆ ಸೂಚನೆ ನೀಡಿದರು. ಅಪಘಾತ ತಪ್ಪಿಸಲು ಬ್ಯಾರಿಕೇಡ್ ಹಾಕಿದರು.

ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಸಿಪಿಐ ಲಕ್ಷ್ಮಣ್, ಶಾಹಿ ಗಾರ್ಮೆಂಟ್ಸ್‌ ಪ್ರಧಾನ ವ್ಯವಸ್ಥಾಪಕ ಬಿನೇಶ್ ಕುಮಾರ್, ಎಚ್.ಆರ್. ವ್ಯವಸ್ಥಾಪಕ ಜೀವಿತ್
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.