ಭಾನುವಾರ, ಡಿಸೆಂಬರ್ 4, 2022
19 °C

ಅಡ್ಡಾದಿಡ್ಡಿಯಾಗಿ ಚಲಿಸಿದ ಕಾರು: ನಾಲ್ವರ ಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ವ್ಯಾಗನಾರ್ ಕಾರಿನ ಚಾಲಕ ಕಾರನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿ ಒಂದು ಕಾರು, ಬೈಕ್, ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ಕುಗ್ವೆ ಗ್ರಾಮದ ಬಳಿ ನಡೆದಿದೆ.

ವ್ಯಾಗನರ್ ಕಾರಿನಲ್ಲಿದ್ದ ಜೋಗದ ನಿವಾಸಿಗಳಾದ ಚಾಲಕ ಕೃಷ್ಣಮೂರ್ತಿ, ಬಾಲಕೃಷ್ಣ, ಮಧು, ಬೈಕ್ ಸವಾರ ಶ್ರೀಧರ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಾಗನರ್ ಕಾರು ಸಾಗರದಿಂದ ಜೋಗದ ಕಡೆ ಹೋಗುತ್ತಿದ್ದಾಗ ಕುಗ್ವೆ ಬಳಿ ಜೋಗದ ಕಡೆಯೇ ಹೋಗುತ್ತಿದ್ದ ಜೆನ್ ಕಾರು ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ಜೋಗದ ಕಡೆಯಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗೂ ವ್ಯಾಗನರ್ ಡಿಕ್ಕಿ ಹೊಡೆದಿದೆ. ಈ ಕಾರಿನ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ವ್ಯಾಗನರ್ ಕಾರಿನ ಜೊತೆಗೆ ಜೆನ್ ಕಾರು, ಖಾಸಗಿ ಬಸ್ ಜಖಂಗೊಂಡಿದ್ದು, ಬೈಕ್ ಅಪ್ಪಚ್ಚಿಯಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್, ಸಬ್ಇನ್‌ಸ್ಪೆಕ್ಟರ್ ಸುಜಾತಾ ಭೇಟಿ ನೀಡಿದ್ದರು. ಅಪಘಾತದ ಕಾರಣ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಭದ್ರೆಯಲ್ಲಿ ಮುಳುಗಿ ಶಿವಮೊಗ್ಗದ ಯುವಕ ಸಾವು

ಕಳಸ: ಬಾಳೆಹೊಳೆ ಸಮೀಪದ ಕಗ್ಗನಳ್ಳ ಬಳಿ ಭದ್ರಾ ನದಿಗೆ ಗುರುವಾರ ಮೀನು ಹಿಡಿಯಲು ಹೋದ ಶಿವಮೊಗ್ಗದ ಹರ್ಷ (24) ಮುಳುಗಿ ಮೃತಪಟ್ಟಿದ್ದಾರೆ.

ಇಬ್ಬರು ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಹರ್ಷ ಮೀನು ಹಿಡಿಯಲು ಹೋದಾಗ ನದಿಗೆ ಜಾರಿ ಬಿದ್ದಿದ್ದರು. ಶೌರ್ಯ ವಿಪತ್ತು ತಂಡವು
ಹುಡುಕಾಟ ನಡೆಸಿತ್ತು. ಸಂಜೆ ಮಲ್ಪೆಯಿಂದ ಬಂದ ಮುಳುಗು ತಜ್ಞ ಈಶ್ವರ್ ಶವ ಪತ್ತೆ ಮಾಡಿದರು. ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು