ಶುಕ್ರವಾರ, ಮೇ 20, 2022
24 °C
ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಬಿಡುಗಡೆ ಸಮಾರಂಭದಲ್ಲಿ ಮುರಳೀಧರ ಒತ್ತಾಯ

ಕುಂಚಿಟಿಗರನ್ನು ‘ಪ್ರವರ್ಗ 1’ಕ್ಕೆ ಸೇರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಕುಂಚಿಟಿಗ ಸಮುದಾಯವನ್ನು ‘ಪ್ರವರ್ಗ-1’ಕ್ಕೆ ಸೇರಿಸಬೇಕು ಎಂದು ಕುಂಚಿಟಿಗ ಮಹಾಸಭಾದ ಅಧ್ಯಕ್ಷ ಮುರಳೀಧರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಕುಂಚಿಟಿಗರ ಸಂಘದ ಆವರಣದಲ್ಲಿ ಭಾನುವಾರ ದಾವಣಗೆರೆ, ಶಿವಮೊಗ್ಗ, ಹಾವೇರಿ, ಕಾರವಾರ ಜಿಲ್ಲೆಗಳ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಒಬಿಸಿ ಪಟ್ಟಿಯಲ್ಲಿ ಸೇರಿಸಲು ಹಾಗೂ ‘ಪ್ರವರ್ಗ 3’ರಿಂದ ‘ಪ್ರವರ್ಗ 1’ಕ್ಕೆ ಸೇರಿಸಲು ಕುಂಚಿಟಿಗರು ಅರ್ಹರು ಎಂದು ಈಗಾಗಲೇ ಹಿಂದುಳಿದ ವರ್ಗಗಳ ಇಲಾಖೆ ಸಿದ್ಧಪಡಿಸಿರುವ ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಹೇಳಿದೆ. ಮೀಸಲಾತಿ ಇಲ್ಲದಿರುವುದರಿಂದ ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳಿಂದ ಸಮುದಾಯದವರು ವಂಚಿತರಾಗುತ್ತಿದ್ದಾರೆ. ಇದುವರೆಗೆ ನ್ಯಾಯವಾಗಿ ಸಿಗಬೇಕಾದ ಮೀಸಲಾತಿ ಈ ಸಮಾಜಕ್ಕೆ ದೊರೆಯದೇ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿನ್ನಡೆಯಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಅಂದಾಜು 20 ಲಕ್ಷ ಕುಂಚಿಟಿಗರು ಇದ್ದಾರೆ. ಈ ಸಮುದಾಯದವರು ಇಂದಿಗೂ ಅನಕ್ಷರತೆ, ಮೂಢನಂಬಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ಗುಡ್ಡಗಾಡು, ಬಯಲುಸೀಮೆ ಹಾಗೂ ಗಡಿಭಾಗಗಳಲ್ಲಿ ಒಣಬೇಸಾಯ, ಮಳೆ ಅವಲಂಬಿತ ಕೃಷಿಯನ್ನು ನಂಬಿದ್ದಾರೆ. ಕುಂಚಿಟಿಗರ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದರು.

‘ಶಿರಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾನ ಮಾಡಿದ ಪ್ರಕಾರ ಈಗ ವರದಿ ಸಿದ್ಧವಾಗಿದೆ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ವರದಿಯನ್ನು ಸಲ್ಲಿಸಲಿದ್ದೇವೆ. ಮುಖ್ಯಮಂತ್ರಿಗಳು ಒಬಿಸಿ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಯಡಿಯೂರಪ್ಪ ಕೊಟ್ಟ ವಾಗ್ದಾನ ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯ ಹಿಂದುಳಿದ ವರ್ಗದ ಅಧ್ಯಯನ ವಿಭಾಗದಿಂದ ಒಂದು ವರ್ಷದ ಅವಧಿಯಲ್ಲಿ ವಿವಿಧ ಪ್ರದೇಶಗಳ ಕುಂಚಿಟಗರ ಅಧ್ಯಯನ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಒಬಿಸಿಗೆ ಸೇರಲು ಎಲ್ಲ ಅರ್ಹತೆ ಇದೆ ಎಂದು ವರದಿ ತಿಳಿಸಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಚುನಾವಣಾ ಸಂದರ್ಭ ಮಾತ್ರ ಕುಂಚಿಟಿಗರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ರಂಗೇಗೌಡ, ‘ಪ್ರವರ್ಗ-1ಕ್ಕೆ ಸೇರ್ಪಡೆ ಬಗ್ಗೆ ರಾಜ್ಯದ ಎಲ್ಲ ಸಮುದಾಯದ ಜನಪ್ರತಿನಿಧಿಗಳು ಹಾಗೂ ಮುಖಂಡರು ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಮನವಿ ಮಾಡಿದರು.

ಸಮಾಜದ ಹಿರಿಯ ಮುಖಂಡ ಎನ್.ಎಚ್. ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಜಿಲ್ಲೆಯ ಕುಂಚಿಟಿಗ ಮುಖಂಡರಾದ ಎಚ್.ಆರ್. ಕಲ್ಲೇಶಪ್ಪ, ಹಾಲಪ್ಪ, ಶಿವಭದ್ರಯ್ಯ, ಲೋಕೇಶ್, ಎಂ.ಸಿ. ಸುರೇಶ್, ಜಗದೀಶ್, ನರಸಿಂಹಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು