ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿದ ಭದ್ರೆಗೆ ಬಾಗಿನ ಅರ್ಪಣೆ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡರಿಂದ ಬಾಗಿನ
Last Updated 31 ಜುಲೈ 2022, 5:29 IST
ಅಕ್ಷರ ಗಾತ್ರ

ಶಿವಮೊಗ್ಗ: ನಿಗದಿತ ಅವಧಿಗೂ ಮುನ್ನವೇ ಭದ್ರಾ ಸೇರಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿ ರೈತರಲ್ಲಿ ಮಂದಹಾಸ ಮೂಡಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.

ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಶನಿವಾರ ಬಾಗಿನ ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ನಿರೀಕ್ಷೆಯಂತೆ ಮಳೆಯಾದ ಕಾರಣ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಕೃಷಿಯಲ್ಲಿ ಹೆಚ್ಚಿನ ಇಳುವರಿ ನಿರೀಕ್ಷಿಸಬಹುದು. ರಾಜ್ಯದ ಕೆಲ ಪ್ರದೇಶಗಳಲ್ಲಿ ಅತಿವೃಷ್ಟಿಯಾಗಿದ್ದು, ಬೆಳೆಹಾನಿ, ಜನ–ಜಾನುವಾರು ಸಾವಿನ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಮೂರು ವರ್ಷಗಳಿಂದ ರಾಜ್ಯದ ಜಲಾಶಯಗಳು ನಿರಂತರವಾಗಿ ಭರ್ತಿಯಾಗುತ್ತಿವೆ. ಇದು ಸಮೃದ್ಧಿಯ ಸಂಕೇತ. ವಿಶೇಷವಾಗಿ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ಸಕಾಲದಲ್ಲಿ ನೀರೊದಗಿಸಲು ಕ್ರಮ ವಹಿಸಲಾಗುವುದು. ಅಚ್ಚುಕಟ್ಟು ಪ್ರದೇಶಾಭಿವೃದ್ಧಿಗೆ ಆಡಳಿತಾರೂಢ ಸರ್ಕಾರ ಅಗತ್ಯ ಅನುದಾನ ಒದಗಿಸಲಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗೆ ವಿಷಾದ ವ್ಯಕ್ತಪಡಿಸಿದ ಸಚಿವರು, ‘ರಾಜ್ಯದಲ್ಲಿ ಎಲ್ಲಾ ವರ್ಗಗಳ ಜನರು ಶಾಂತಿ–ಸಹಬಾಳ್ವೆಯಿಂದ ಜೀವನ ನಡೆಸುವಂತಾಗಬೇಕು. ಶಾಂತಿಗೆ ಭಂಗ ತರುವ ಯಾವುದೇ ಕೃತ್ಯಕ್ಕೆ ಮುಂದಾಗಬಾರದು’ ಎಂದು ಮನವಿ ಮಾಡಿದರು.

ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ 5 ಲಕ್ಷ ಹೆಕ್ಟೇರ್ ಪ್ರದೇಶವಿದ್ದು, ಸದ್ಯ 2.50 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿದೆ. ಉಳಿದ ಪ್ರದೇಶಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆರ್ಥಿಕ ನೆರವಿನಿಂದ ನೀರನ್ನು ಒದಗಿಸುವ ಕಾರ್ಯಕ್ಕೆ ಅನುಮೋದನೆ ದೊರೆತಿದೆ. ಕಾಮಗಾರಿ ಆರಂಭಗೊಂಡಿವೆ ಎಂದು ಸಂಸದ ಬಿ.ವೈ. ರಾಘವೇಂದ್ರಹೇಳಿದರು.

ಕಳೆದ ವರ್ಷಕ್ಕಿಂತ ಈ ವರ್ಷ ಒಂದು ತಿಂಗಳು ಮುಂಚಿತವಾಗಿ ಜಲಾಶಯ ಭರ್ತಿಯಾಗಿದೆ. ಅಧಿಕಾರಾವಧಿಯಲ್ಲಿ ಹಗಲಿರುಳು ರೈತರೊಂದಿಗಿದ್ದು, ಅವರಿಗೆ ಪ್ರಾಮಾಣಿಕವಾಗಿ ಸಹಕರಿಸಲಾಗುವುದು. ಭದ್ರಾ ಅಚ್ಚುಕಟ್ಟು ಪ್ರದೇಶದ 2.62 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಈಗ ಕೃಷಿ ಚಟುವಟಿಕೆ ಸಾಗಿದೆ ಎಂದು ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ
ಹೇಳಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕನಾಯ್ಕ್, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ್ರು, ಡಿ.ಎಸ್.ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಎಸ್ಪಿ ಲಕ್ಷ್ಮೀಪ್ರಸಾದ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ವೀರಭದ್ರಪ್ಪ, ಕುಲಸಚಿವರಾದ ಜಿ. ಅನುರಾಧ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT