ಆನಂದಪುರ: ಅಕ್ರಮವಾಗಿ ಹಣ ಸಂಪಾದಿಸಿ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿ ಶಾಸಕರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಸಾಗರ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಅವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ್ ಹೊನಗೋಡು ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.
ಅವರು ಆನಂದಪುರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಗಣಪತಿ ಹಬ್ಬದಲ್ಲಿ ಬಿಟ್ಟಿ ಹಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸುವ ನೀನು, ಬೀಟೆ ಹಾಗೂ ಸಾಗುವಾನಿ ನಾಟ ಮಾರಿ, ಅಕ್ರಮ ಮರಳು ಸಾಗಾಟ ಮಾಡಿರುವ ಹಣ ಬಿಟ್ಟಿಯಲ್ಲವೇ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
‘ಇತ್ತೀಚೆಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಬ್ಬೊರಿಗೆ ₹4ರಿಂದ ₹5 ಲಕ್ಷ ನೀಡಿದ್ದಿರಲ್ಲಾ ಅದು ಬಿಟ್ಟಿಯಲ್ಲವೇ? ನಿಮ್ಮ ಅಕ್ರಮಗಳ ಬಗ್ಗೆ ಒಂದು ದೊಡ್ಡ ಪಟ್ಟಿಯೇ ಇದೆ. ಹೀಗಿರುವಾಗ ಶಾಸಕರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ. ಅಭಿವೃದ್ದಿ, ಅಕ್ರಮಗಳ ಬಗ್ಗೆ ನೇರವಾಗಿ ಮಾತನಾಡೋಣ’ ಎಂದು ಪಂಥ್ವಾಹ್ವಾನ ನೀಡಿದರು.
ಶಾಸಕ ಬೇಳೂರು ಕೃಪಾಕಟಾಕ್ಷದಿಂದಲೇ ಗೆದ್ದ ನಿಮಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರ್ ಪ್ರಶ್ನೆ ಮಾಡಿದರು.
‘ಬಿಜೆಪಿಯವರು ಹಬ್ಬ, ಧಾರ್ಮಿಕ ಕಾರ್ಯಕ್ರಮಗಳ ದುರ್ಲಾಭ ಪಡೆಯುವ ಸಾಧ್ಯತೆ ಇದೆ. ಗಣಪತಿ ಹಬ್ಬದಲ್ಲಿ ಗಲಾಟೆ ಆಗುತ್ತದೆ ಎಂದು ರತ್ನಾಕರ್ ಅವರೇ ಹೇಳಿರುವ ಕಾರಣ ಪೋಲಿಸರು ಅವರ ಮೇಲೆ ಕಣ್ಣಿಡುವುದು ಸೂಕ್ತ’ ಎಂದರು.
ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲಿಮುಲ್ಲಾ ಖಾನ್, ಪ್ರಮುಖರಾದ ಉಮೇಶ್ ಎನ್., ಗಜೇಂದ್ರ, ಶರತ್ ನಾಗಪ್ಪ, ಅಬ್ದುಲ್ ರಜಾಕ್, ನಜರುಲ್ಲಾ ಖಾನ್, ಲಿಂಗರಾಜ್, ರಹಮತ್ ವುಲ್ಲಾ, ವಿಜಯ್ ಕುಮಾರ್, ಅಶ್ವಿನ್ ಇದ್ದರು.