ಶುಕ್ರವಾರ, ಫೆಬ್ರವರಿ 3, 2023
25 °C
ಕರ್ನಾಟಕ ಸಂಘದ 92ನೇ ವಾರ್ಷಿಕೋತ್ಸವ ಸಮಾರಂಭ, ಹಿರಿಯರ ಸನ್ಮಾನ

ಶಿವಮೊಗ್ಗ: ಅರ್ಜಿ–ಮರ್ಜಿಯ ಸಾಧಕರಿಗೆ ಮನ್ನಣೆ, ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಾಡಿನಲ್ಲಿ ಅರ್ಜಿ–ಮರ್ಜಿಗಳ ನಡುವೆ, ನಿಜವಾದ ಸಾಧಕರು ಬಹುಮಾನ ಪಡೆದುಕೊಂಡಿರುವುದಕ್ಕಿಂತ ಸಮಯ ಸಾಧಕರು ಬಹುಮಾನ ಹೊಡೆದುಕೊಂಡಿರುವುದೇ ಹೆಚ್ಚು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಹೇಳಿದರು.

ಇಲ್ಲಿನ ಕರ್ನಾಟಕ ಸಂಘದ 92ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶನಿವಾರ ಹಿರಿಯರನ್ನು ಗೌರವಿಸಿ ಮಾತನಾಡಿದರು.

‘ನಾನು ಹಲವು ‍ಪುರಸ್ಕಾರಗಳ ಸಮಿತಿಯಲ್ಲಿ ಇದ್ದೇನೆ. ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ಯಾರಾದರೂ ಅರ್ಜಿ ಕೊಟ್ಟರೆ ಮೊದಲು ಪಕ್ಕಕ್ಕೆ ತೆಗೆದು ಇಡಿ ಎಂದು ಹೇಳುತ್ತೇನೆ. ಸಾಧಕರನ್ನು ನಾವು ಗುರುತಿಸಬೇಕು. ಸಾಧಕ ನಾನು ಹೀಗೆ ಮಾಡಿದ್ದೇನೆ ಎಂದು ಹೇಳಿಕೊಂಡರೆ ಸಾಧಕನಿಗೂ, ಸಾಧನೆಗೂ ಮಾಡಿರುವ ಅಪಮಾನ’ ಎಂದರು.

‘ನಿಜವಾದ ಸಾಧನೆ ಮಾಡಿದವರು ಆತ್ಮಾಭಿಮಾನ ಬಿಟ್ಟು ಅರ್ಜಿ ಹಿಡಿದುಕೊಂಡು ಎಲ್ಲಿಗೂ ಬರೊಲ್ಲ. ಸ್ವಾಭಿಮಾನ, ಆತ್ಮಾಭಿಮಾನ ಬಹಳ ಮುಖ್ಯ ಆಗಿರುತ್ತದೆ. ದೂರದರ್ಶನದಲ್ಲಿ ಕೆಲಸ ಮಾಡುವಾಗಲೂ ಅರ್ಜಿ–ಮರ್ಜಿಯ ಸಂಸ್ಕೃತಿಯನ್ನು ದೂರ ಇಟ್ಟಿದ್ದೆ. ಕನ್ನಡ ಸಾಹಿತ್ಯ ಪರಿಷತ್‌ನಲ್ಲೂ ಮುಂದೆ ಏನು ಮಾಡಬೇಕು ಎಂಬ ನಕಾಶೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಸಾಹಿತ್ಯ ಪರಿಷತ್ ಕೇವಲ ಸಾಹಿತಿಗಳ ಪರಿಷತ್ ಅಲ್ಲ. ಬದಲಿಗೆ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ ಎಲ್ಲವನ್ನೂ ಒಳಗೊಂಡ ಜನಸಾಮಾನ್ಯರ ಪರಿಷತ್’ ಎಂದು ಹೇಳಿದರು.

‘86ನೇ ಅಖಿಲ ಭಾರತ ಸಮ್ಮೇಳನದಲ್ಲಿ ಏನಾದರೂ ಹೊಸದನ್ನು ತರಬೇಕು ಎಂಬ ಉದ್ದೇಶದಿಂದ ಭುವನಗಿರಿಯಲ್ಲಿರುವ ತಾಯಿ ಭುವನೇಶ್ವರಿ ದೇವಸ್ಥಾನದಲ್ಲಿನ ದೀಪವನ್ನು ನಂದಾ ದೀಪವನ್ನಾಗಿ ಮಾಡಿ ಕನ್ನಡದ ರಥಕ್ಕೆ ಪೂಜೆ ಮಾಡಿದ್ದು, ಎಲ್ಲ ಜಿಲ್ಲೆಗಳಲ್ಲೂ ಆ ರಥ ಸಂಚರಿಸಲಿದೆ. ಆ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದೇವೆ’ ಎಂದರು.

‘ಕರ್ನಾಟಕ ಸಂಘದ ಗೌರವ ಸದಸ್ಯತ್ವ ಬಹುಪಾಲು ಸಾಹಿತಿಗಳು ಇದ್ದಾರೆ. ಆ ಸದಸ್ಯತ್ವ ಸಂಖ್ಯೆಯನ್ನು ವಿಸ್ತಾರ ಮಾಡಿ ಬೇರೆ ಬೇರೆ ರಂಗದವರಿಗೂ ಅವಕಾಶ ಕೊಡಿ ಎಂದು ಸಲಹೆ ನೀಡಿದರು. ಇಂದು ವಿಶ್ವದಲ್ಲಿಯೇ ಕನ್ನಡಕ್ಕೆ ಇಂದು ಮನ್ನಣೆ ದೊರೆತಿದೆ. ಅದಕ್ಕೆ ನಮ್ಮ ಕನ್ನಡದ ಯುವಕರು ಕಾರಣ’ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್‌.ಸುಂದರರಾಜ್‌, ಗೌರವ ಕಾರ್ಯದರ್ಶಿ ಎಂ.ಆಶಾಲತಾ ಇದ್ದರು.

ಸಂಘದ ಹಿರಿಯ ಸದಸ್ಯರಾದ ಎಚ್.ಡಿ.ಬಾಲಚಂದ್ರಶಾಸ್ತ್ರಿ, ಡಿ.ಎನ್.ಶ್ರೀನಿವಾಸ್, ಎಂ.ಚಿದಂಬರ, ಜಿ.ಜಯದೇವಪ್ಪ, ಜಿ.ಎಸ್.ವೆಂಕಟಗಿರಿರಾವ್, ಎನ್.ಆರ್.ಪ್ರಕಾಶ್, ಸಿ.ವಿ.ರಾಘವೇಂದ್ರರಾವ್, ಎಚ್‌.ಜಿ.ಅರುಂಧತಿ ಶಾಸ್ತ್ರಿ, ಕೆ.ಚಕ್ರಪಾಣಿ, ಡಾ.ಸಿ.ಎಸ್.ನಂಜುಂಡಯ್ಯ, ರಿಚರ್ಡ್ ಕ್ವಾಡ್ರಸ್, ಎ.ಜಿ.ನಟರಾಜ್, ಡಾ.ಶೇಖರ್ ಗೌಳೇರ್, ಎಂ.ಎನ್.ಸುಂದರರಾಜ್‌ ಅವರನ್ನು ಸನ್ಮಾನಿಸಲಾಯಿತು.

ಛಾಯಾಗ್ರಾಹಕರಾದ ಶಿವಮೊಗ್ಗ ನಾಗರಾಜ್ ಹಾಗೂ ಎಂ.ನಿಂಗನಗೌಡ ಅವರ ಛಾಯಾಚಿತ್ರಗಳ ಪ್ರದರ್ಶನ, ಚಂದ್ರಿಕಾ ಗಿರಿಮಾಜಿ ಅವರ ಚಿತ್ರಕಲಾ ಪ್ರದರ್ಶನ ಗಮನ ಸೆಳೆಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು