ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸನಗರ: ಅಡಿಕೆಗೆ ಎಲೆಚುಕ್ಕಿ ರೋಗ, ವಿಜ್ಞಾನಿಗಳ ಭೇಟಿ

ರೋಗ ತಡೆಗೆ ರೈತರಿಗೆ ಸಲಹೆ ನೀಡಿದ ತಂಡ
Last Updated 2 ಅಕ್ಟೋಬರ್ 2021, 2:06 IST
ಅಕ್ಷರ ಗಾತ್ರ

ಹೊಸನಗರ: ಹೊಸನಗರ ತಾಲ್ಲೂಕಿನ ವಿವಿಧೆಡೆ ಅಡಿಕೆಗೆ ಎಲೆಚುಕ್ಕಿ ರೋಗ ವ್ಯಾಪಕವಾಗಿ ಕಂಡುಬಂದಿದೆ. ಈ ರೋಗ ಹರಡಲು ತೋಟದ ಮಣ್ಣಿನಲ್ಲಿ ಪೊಟ್ಯಾಶ್‌ ಅಂಶ ಕಡಿಮೆ ಇರುವುದೇ ಮುಖ್ಯ ಕಾರಣ ಎಂದು ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ(ಐಸಿಎಆರ್-ಸಿಪಿಸಿಆರ್‌ಐ) ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಲ್ಲೂಕಿನ ನಿಟ್ಟೂರಿನಲ್ಲಿ ಶೋಧಾ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಆಯೋಜಿಸಿದ್ದ ಕಾರ್ಯಾಗಾರದ ಭಾಗವಾಗಿ ವಿಜ್ಞಾನಿಗಳಾದ ಡಾ. ರವಿಭಟ್, ಡಾ.ವಿನಾಯಕ ಹೆಗಡೆ ಅವರು ನಿಟ್ಟೂರು ಮತ್ತು ಶಂಕಣ್ಣ ಶಾನುಭೋಗ್ ಪ್ರದೇಶದಲ್ಲಿ ವಿವಿಧ ಅಡಿಕೆ ತೋಟಗಳ ಮಣ್ಣನ್ನು ಪರಿಶೀಲಿಸಿ ರೈತರಿಗೆ ಮಾಹಿತಿ ನೀಡಿದರು.

ಎಲೆಚುಕ್ಕಿರೋಗದ ಸೋಂಕು ಗಾಳಿಯಲ್ಲಿ ಹರಡುವ ಕಾರಣ ವ್ಯಾಪಕವಾಗಿ ಹರಡುತ್ತಿದೆ. ಈ ಪ್ರದೇಶದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಫಂಗಸ್ ಹರಡುತ್ತಿದೆ. ಎಲ್ಲಾ ರೈತರು ಸಾಮೂಹಿಕವಾಗಿ ಶೀಲೀಂಧ್ರ ನಾಶಕ ಸಿಂಪಡಿಸಿದಲ್ಲಿ ಮಾತ್ರ ರೋಗ ತಡೆಗಟ್ಟುತ್ತದೆ. ಈ ರೋಗ ಒಮ್ಮೆಲೇ ಮರಗಳನ್ನು ಕೊಲ್ಲುವುದಿಲ್ಲ. ಹಂತಹಂತವಾಗಿ ಸಾಯಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದರು.

ಎಲೆಚುಕ್ಕಿರೋಗ ಬಹಳ ಹಿಂದಿನಿಂದಲೂ ಇದೆ. 5 ವರ್ಷದ ಹಿಂದೆ ತ್ರಿಪುರಾಗೆ ಭೇಟಿ ನೀಡಿದಾಗ ಅಲ್ಲಿ ಇದಕ್ಕಿಂತಲೂ ಹೆಚ್ಚು ರೋಗದ ತೀವ್ರತೆ ಕಂಡು ಬಂದಿತ್ತು. ಇಲ್ಲಿಯ ಮಣ್ಣಿನಲ್ಲಿ ಪೊಟ್ಯಾಶ್‌ ಅಂಶ ಕಡಿಮೆ ಇದೆ. ರಂಜಕ ಹೆಚ್ಚಿದೆ. ಮಣ್ಣು ಅಕ್ಷಯ ಪಾತ್ರೆಯಲ್ಲ. ಪ್ರತಿ ಬೆಳೆ ಬರುತ್ತಿದ್ದಂತೆ ಮಣ್ಣಿನಲ್ಲಿ ಪೌಷ್ಟಿಕಾಂಶ ಕಡಿಮೆಯಾಗುತ್ತಿದೆ. ಯಾವ ಅಂಶ ಕಡಿಮೆಯಾಗುತ್ತದೆ ಅದನ್ನು
ನಿರಂತರವಾಗಿ ನೀಡುತ್ತಾ ಬರಬೇಕು ಎಂದರು.

ಮಣ್ಣು ಪರೀಕ್ಷೆ ಮಾಡಿಸಿ. ಮಣ್ಣಿನಲ್ಲಿರುವ ಅಂಶದ ಆಧಾರದ ಮೇಲೆ ಶೀಲೀಂಧ್ರ ನಾಶಕ ಸಿಂಪಡಿಸಬೇಕು. ತುರ್ತಾಗಿ ಪರಿಹಾರೋಪಾಯವನ್ನು ಅಳವಡಿಸಿ
ಕೊಂಡಲ್ಲಿ ಅಡಿಕೆ ಮರಗಳನ್ನು ಉಳಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ವಿಜ್ಞಾನಿಗಳು ಮಹತ್ವದ ಸಲಹೆ ನೀಡಿದ್ದಾರೆ. ಇದು ಸಾಕಾರಗೊಳ್ಳಲು ಸರ್ಕಾರದ ವಿಶೇಷ ಆಸಕ್ತಿ ತೋರಬೇಕು ಎಂದು ಶೋಧಾ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಅಧ್ಯಕ್ಷ ಪುರುಶೋತ್ತಮ ಬೆಳ್ಳಕ್ಕ ಒತ್ತಾಯಿಸಿದರು.

ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ರಾಮಚಂದ್ರ ಮಾತನಾಡಿ, ‘ಎಲೆಚುಕ್ಕಿ ರೋಗ ಪ್ರತಿವರ್ಷ ಇರುತ್ತದೆ. ಈ ಬಾರಿ ಉಲ್ಬಣಗೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಹಿಂದೆ ನವಿಲೆ ಕೃಷಿ ವಿಜ್ಞಾನಿಗಳನ್ನು ಕರೆಸಿ ಅಧ್ಯಯನ ಮಾಡಿಸಲಾಗಿತ್ತು. ಇದೀಗ ಶೋಧಾ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಸಂಸ್ಥೆಯ ವಿಜ್ಞಾನಿಗಳಿಂದ ಅಧ್ಯಯನ ಮಾಡಲಾಗಿದೆ. ಅವರು ನೀಡುವ ಮಾರ್ಗೋಪಾಯದ ಆಧಾರದ ಮೇಲೆ ಸರ್ಕಾರಕ್ಕೆ ಸಮಗ್ರ ವರದಿ ನೀಡಲಾಗುವುದು’ ಎಂದರು.

ತಾಲ್ಲೂಕು ತೋಟಾಗಾರಿಕಾಧಿಕಾರಿ ಪುಟ್ಟನಾಯ್ಕ್, ಪ್ರಮುಖರಾದ ಸತ್ಯನಾರಾಯಣ ಭಟ್, ಪರಮೇಶ್ವರ್, ದೇವರಾಜ್, ವಿನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT