ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಗರ: ಅಡಿಕೆ ಮಾರುಕಟ್ಟೆ ಮೇಲೆ ಕಲಬೆರಕೆ ಕರಿನೆರಳು

Published : 26 ಸೆಪ್ಟೆಂಬರ್ 2024, 20:06 IST
Last Updated : 26 ಸೆಪ್ಟೆಂಬರ್ 2024, 20:06 IST
ಫಾಲೋ ಮಾಡಿ
Comments

ಸಾಗರ: ಇಲ್ಲಿನ ಅಡಿಕೆ ವರ್ತಕರು ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಿದ್ದ 5,000 ಟನ್ ಕೆಂಪಡಿಕೆ ಕಲಬೆರಕೆಯಿಂದ ಕೂಡಿದೆ ಎಂಬ ಕಾರಣಕ್ಕೆ ವಾಪಸ್ ಬಂದಿರುವುದು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಅಡಿಕೆಯನ್ನು ಸುಲಿದ ಬಳಿಕ ಬೇಯಿಸದೆ ಮಾರಾಟ ಮಾಡುವುದಕ್ಕೆ ಬಿಳಿ ಚಾಲಿ ಎನ್ನುತ್ತಾರೆ. ಹಸಿ ಅಡಿಕೆ ಸುಲಿದು, ಬೇಯಿಸಿ, ಒಣಗಿಸಿ ಈ ಪ್ರಕ್ರಿಯೆಯಲ್ಲಿ ಸಹಜವಾಗಿ ಉತ್ಪನ್ನವಾಗುವ ಅಡಿಕೆ ಚೊಗರಿನಿಂದ ಬಣ್ಣ ಹಾಕಿ ಸಿದ್ಧಪಡಿಸುವ ಅಡಿಕೆಗೆ ಕೆಂಪಡಿಕೆ ಎನ್ನಲಾಗುತ್ತದೆ.  ಮಾರುಕಟ್ಟೆಯಲ್ಲಿ ಬಿಳಿ ಚಾಲಿ ಅಡಿಕೆ ಕ್ವಿಂಟಲ್‌ಗೆ ₹ 30,000 ಇದ್ದರೆ, ಕೆಂಪಡಿಕೆಗೆ ₹ 40,000 ದರ ಇದೆ. ಆದರೆ, ‘ಈಚೆಗೆ ಬೆಲೆಯಲ್ಲಿ ಶೇ 40ರಷ್ಟು ವ್ಯತ್ಯಾಸವಾಗಿದ್ದು, ಬಿಳಿ ಚಾಲಿ ಅಡಿಕೆಗೆ ವಿದೇಶದಿಂದ ಆಮದಾಗುವ ಕಳಪೆ ಗುಣಮಟ್ಟದ ಬಣ್ಣ ಬೆರೆಸಿ ಕೆಂಪಡಿಕೆ ಎಂದು ಮಾರಾಟ ಮಾಡಿದ್ದು ಕಾರಣ’ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಡಿಕೆ ಕೃಷಿಗೆ ಕೂಲಿಕಾರ್ಮಿಕರು ದೊರಕದೆ ಇರುವುದು, ಮಲೆನಾಡಿನ ಯುವ ತಲೆಮಾರು ನಗರ ಪ್ರದೇಶಕ್ಕೆ ವಲಸೆ ಹೋಗಿರುವ ಕಾರಣಗಳಿಗಾಗಿ ಅಡಿಕೆ ತೋಟ ಗುತ್ತಿಗೆಗೆ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಗುತ್ತಿಗೆ ಪಡೆದ ಕೆಲವರು ಆಯ್ದ ವರ್ತಕರಿಗೆ ಅಡಿಕೆಯನ್ನು ಮಾರಾಟ ಮಾಡುವಾಗ ಕಲಬೆರಕೆ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ.

ತೆರಿಗೆ ತಪ್ಪಿಸಿ ಮನೆ ಬಾಗಿಲಿನಲ್ಲೇ ಅಡಿಕೆ ಖರೀದಿಸುವವರು ಕೂಡ ಕಲಬೆರಕೆ ವಹಿವಾಟಿನಲ್ಲಿ ಭಾಗಿಯಾಗಿರುವ ಬಗ್ಗೆ ದೂರುಗಳಿವೆ. ಇದರ ಜೊತೆಗೆ ಕೆಲವು ಲಾಭಕೋರ ಮನಸ್ಥಿತಿಯ ವರ್ತಕರ ಪಾತ್ರವೂ ಇದೆ ಎಂದೂ ಅನೇಕರು ಆರೋಪಿಸಿದ್ದಾರೆ.

‘ಹೆಚ್ಚಿನ ಲಾಭ ಪಡೆಯಲು ನೆಲಕ್ಕೆ ಬಳಸುವ ರೆಡ್‌ ಆಕ್ಸೈಡ್‌ ಅನ್ನು ಅಡಿಕೆಗೆ ಮಿಶ್ರಣ ಮಾಡುತ್ತಿರುವುದು ಆತಂಕ ಮೂಡಿಸಿದೆ. ಇದರಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿದ್ದು, ಸೇವಿಸಿದವರ ಆರೋಗ್ಯ ಹದಗೆಡುವುದು ಖಚಿತ’ ಎಂದು ಬಳಕೆದಾರರ ವೇದಿಕೆ ಅಧ್ಯಕ್ಷ ಕೆ.ಎನ್. ವೆಂಕಟಗಿರಿ ಹೇಳಿದರು.

‘ಅಡಿಕೆ ಸೇರಿ ವಿವಿಧ ಆಹಾರ ಬೆಳೆಗಳ ಕಲಬೆರಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯಡಿ ರಾಜ್ಯಕ್ಕೊಬ್ಬರು ಆಹಾರ ಸುರಕ್ಷತಾ ಆಯುಕ್ತರಿದ್ದರೆ, ಜಿಲ್ಲಾಮಟ್ಟದಲ್ಲಿ ಒಬ್ಬ ನಿಯೋಜಿತ ಅಧಿಕಾರಿ, ತಾಲ್ಲೂಕು ಮಟ್ಟದಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಎಪಿಎಂಸಿ ಪ್ರಾಂಗಣದ ಹೊರಗೆ ನಡೆಯುವ ವಹಿವಾಟನ್ನು ನಿಯಂತ್ರಿಸುವ ಅಧಿಕಾರ ಎಪಿಎಂಸಿ ಅಧಿಕಾರಿಗಳಿಗೆ ಇಲ್ಲ. ಹೀಗಾಗಿ ಆಯಾ ಭಾಗದ ಆಹಾರ ಸುರಕ್ಷತಾ ಅಧಿಕಾರಿಗಳೇ ಕಲಬೆರಕೆ ತಡೆಯಲು ತಮಗೆ ಇರುವ ಅಧಿಕಾರವನ್ನು ಪರಿಣಾಮಕಾರಿಯಾಗಿ ಚಲಾಯಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾದ್ದರಿಂದ ಅಡಿಕೆ ಬೆಳೆಯನ್ನು ನಿಷೇಧಿಸಬೇಕು ಎಂದು ಪರಿಹಾರ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಹೀಗೆ ಕಲಬೆರಕೆಯಾದ ಅಡಿಕೆಯನ್ನೇ ನ್ಯಾಯಾಲಯವು ಪರಿಗಣಿಸಿದರೆ, ಅಡಿಕೆ ಬೆಳೆಯನ್ನೇ ನಿಷೇಧ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ಒತ್ತಾಯಿಸಿದರು.

ಬೆಳೆಗಾರರು ಕಲಬೆರಕೆ ಕೃತ್ಯದಲ್ಲಿ ತೊಡಗಿಲ್ಲ. ಒಂದು ವೇಳೆ ಬೆಳೆಗಾರರೂ ಹಾಗೆ ಮಾಡಿದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಪಿಎಂಸಿಗೆ ಮನವಿ ಮಾಡಲಾಗಿದೆ.
-ವ.ಶಂ.ರಾಮಚಂದ್ರ ಭಟ್ ಅಧ್ಯಕ್ಷರು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ
ಅಡಿಕೆ ಕಲಬೆರಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಸುಳಿವು ದೊರಕಿದಲ್ಲಿ ಆ ಬಗ್ಗೆ ಮಾಹಿತಿ ನೀಡಿದರೆ ಸಂಬಂಧಪಟ್ಟ ಘಟಕಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲಾಗುವುದು. 9986000667 ಈ ಸಂಖ್ಯೆಗೆ ಕರೆ ಮಾಡಬಹುದು. ರಿ
-ಗುರುರಾಜ್ ಆಹಾರ ಸುರಕ್ಷತಾ ಅಧಿಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT