ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿಕಾಂಬಾ ದೇವಸ್ಥಾನದ ಸಮಿತಿ ಸಭೆಯಲ್ಲಿ ಕಿತ್ತಾಟ

ದೇವಸ್ಥಾನದ ನೂತನ ಸಮಿತಿ ರಚನೆ ವಿಷಯ; ಗೊಂದಲದಿಂದ ಸಭೆ ಮೊಟಕು
Last Updated 8 ಆಗಸ್ಟ್ 2022, 4:45 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಮಾರಿಕಾಂಬಾ ದೇವಸ್ಥಾನದ ವ್ಯವಸ್ಥಾಪಕ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಾವ ರೀತಿ ನಡೆಯಬೇಕು ಎನ್ನುವ ವಿಷಯದ ಕುರಿತು ಭಾನುವಾರ ನಡೆದ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರು ‍ಪರಸ್ಪರ ಕೈ ಕೈ ಮಿಲಾಯಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಇಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ನಡೆದ ಸಭೆಯಲ್ಲಿ ಒಂದು ಗುಂಪು ಚುನಾವಣೆ ಮೂಲಕ ನೂತನ ಸಮಿತಿಗೆ ನಿರ್ದೇಶಕರನ್ನು ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದಿತ್ತು. ಮತ್ತೊಂದು ಗುಂಪು ಸಮಿತಿ ಶಿವಮೊಗ್ಗದ ನ್ಯಾಯಾಲಯದಲ್ಲಿ ದಾಖಲಿಸಿರುವ ಸ್ಕೀಂ ದಾವೆಯಲ್ಲಿ ಪ್ರತಿವಾದಿಗಳಾಗಿ ಸೇರಿರುವ 17 ಮಂದಿಯನ್ನು ಒಳಗೊಂಡಂತೆ ನೂತನ ನಿರ್ದೇಶಕರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿತು.

ಈ ವಿಷಯದ ಕುರಿತು ಸದಸ್ಯರ ನಡುವೆ ಮಾತಿಗೆ ಮಾತು ಬೆಳೆದು ಸಭೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.

ಸದಸ್ಯ ಡಿ.ದಿನೇಶ್ , ‘ನೀವು ಯಾವ 17 ಮಂದಿಯನ್ನು ಸಮಿತಿಗೆ ಸೇರಿಸಿಕೊಳ್ಳಲು ಹೊರಟಿದ್ದೀರೊ ಅವರು ನಿಮ್ಮ ಬಗ್ಗೆ ಕಳೆದ ಸಭೆಯಲ್ಲಿ ಹೀನಾಯವಾಗಿ ಮಾತನಾಡಿದ್ದಾರೆ. ಅಂತವರನ್ನು ಹೇಗೆ ಸೇರಿಸಿಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದಾಗ, ಸಮಿತಿಯ ಪದಾಧಿಕಾರಿ ಅಶೋಕ್ ಅವರು ತೋಳು ಏರಿಸಿ ದಿನೇಶ್ ಅವರ ಮೇಲೆ ಹಲ್ಲೆ ಮಾಡಲು ಮುಂದಾದರು. ಆಗ ಸಭೆಯಲ್ಲಿದ್ದವರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಈ ಹಂತದಲ್ಲಿ ಸಮಿತಿಯ ಕಾರ್ಯದರ್ಶಿ ಬಿ.ಗಿರಿಧರ ರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಚುನಾವಣೆ ನಡೆಸಲು ನಾವು ಸಿದ್ದ ಎಂದು ತಿಳಿಸಿದರು.

ಆದರೆ ಸಭೆಯಲ್ಲಿ ಘರ್ಷಣೆ ನಡೆದಿರುವುದರಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಸಮಿತಿ ಅಧ್ಯಕ್ಷ ಕೆ.ಎನ್. ನಾಗೇಂದ್ರ ಸಭೆಯಿಂದ ನಿರ್ಗಮಿಸಿದರು.

ಇದಕ್ಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಸದಸ್ಯರ ಅಭಿಪ್ರಾಯಗಳಿಗೆ ಅನುಗುಣವಾಗಿ ನಿರ್ಣಯ ತೆಗೆದುಕೊಳ್ಳದೇ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT