ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತಾ ಸಿಬ್ಬಂದಿ ಸೇವೆ ಕಾಯಂಗೆ ಯತ್ನ

ರಾಜ್ಯ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಭರವಸೆ
Last Updated 22 ಜನವರಿ 2022, 4:57 IST
ಅಕ್ಷರ ಗಾತ್ರ

ಶಿವಮೊಗ್ಗ: ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಅರೆಕಾಲಿಕ ಸಿಬ್ಬಂದಿ ಕಾಯಂಗೊಳಿಸಲು ಶೀಘ್ರ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ರಾಜ್ಯ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಭರವಸೆ ನೀಡಿದರು.

ನಗರದಲ್ಲಿರುವ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಮಾತನಾಡಿದರು.

ರಾಜ್ಯದ ಸ್ಥಳೀಯ ಸೇವಾ ಸಂಸ್ಥೆಗಳು, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಇರಬಹುದಾದ ಉದ್ಯೋಗಾವಕಾಶ ಕುರಿತು ಚರ್ಚಿಸಲಾಗುವುದು. ಸಿಮ್ಸ್‌ ಅಧಿಕಾರಿಗಳು ಇಲ್ಲಿನ ಸ್ವಚ್ಛತಾ ಕಾರ್ಮಿಕರಿಂದ ಯಾವುದೇ ದೂರುಗಳು ಬಾರದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಮೆಗ್ಗಾನ್‌ ಆಸ್ಪತ್ರೆಯಲ್ಲಿ 163 ಮಂದಿ ಸ್ವಚ್ಛತಾ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಇಲ್ಲಿನ ಅಧಿಕಾರಿಗಳು ಸಿಬ್ಬಂದಿ ನೇಮಕ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರೆ ಮುಖ್ಯಮಂತ್ರಿ ಜತೆ ಚರ್ಚಿಸಿ, ಸಿಬ್ಬಂದಿ ನೇಮಕಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕೊರೊನಾ ಕಾಲದಲ್ಲಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತಾ ಸಿಬ್ಬಂದಿಗೆ ವೇತನ ಹೊರತುಪಡಿಸಿ, ಹೆಚ್ಚುವರಿಯಾಗಿ ಪಾವತಿಸಬೇಕಾಗಿದ್ದ ಗೌರವಧನ ಪಾವತಿಯಾಗದೆ ಉಳಿದಿದೆ. ಸರ್ಕಾರದಿಂದ ₹ 3.50 ಕೋಟಿ ಅನುದಾನ ಮಂಜೂರಾಗಿದೆ. ಕೂಡಲೇ ಪಾವತಿಸಬೇಕು. ಹಗಲಿರುಳು ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸುರಕ್ಷತಾ ಕ್ರಮವಾಗಿ ಲಸಿಕೆ ನೀಡುವುದು. ಮುಖಗವಸು, ಕೈಗವಸು, ಸ್ಯಾನಿಟೈಸರ್ ಮುಂತಾದ ಸುರಕ್ಷತಾ ಪರಿಕರಗಳನ್ನು ಒದಗಿಸುವಂತೆ ಮೆಗ್ಗಾನ್ ಆಸ್ಪತ್ರೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆಸೂಚಿಸಿದರು.

ಹೊರಗುತ್ತಿಗೆ ಸಿಬ್ಬಂದಿಗೆ ಸಕಾಲಿಕ ವೇತನ ಪಾವತಿಯಾಗದಿರುವ ಬಗ್ಗೆ ಸ್ವಚ್ಛತಾ ಕಾರ್ಮಿಕರಿಂದ ಅಹವಾಲುಗಳಿವೆ. ಸಕಾಲದಲ್ಲಿ ವೇತನ ಪಾವತಿಗೆ ಕ್ರಮ ವಹಿಸುವಂತೆ ಮಾನವ ಸಂಪನ್ಮೂಲ ಸರಬರಾಜು ಸಂಸ್ಥೆಯ ಮುಖ್ಯಸ್ಥರಿಗೆಸೂಚಿಸಿದ ಅವರು, ಪಿ.ಎಫ್., ಜಿ.ಪಿ.ಎಫ್ ಸೇರಿ ವೇತನ, ಭತ್ಯೆಗಳು ಪಾವತಿಯಾಗಿರುವ ಬಗ್ಗೆ ವೇತನ ಪ್ರಮಾಣಪತ್ರ ನೀಡುವಂತೆ ಸಲಹೆ ನೀಡಿದರು.

ಶಿವಮೊಗ್ಗ ವೈದ್ಯಕೀಯ ಕಾಲೇಜು ಸಿಇಒ ಶಿವಕುಮಾರ್, ಜಿಲ್ಲಾ ಸರ್ಜನ್ ಸಿದ್ದನಗೌಡ ಪಾಟೀಲ್, ಮೆಗ್ಗಾನ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT