ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರರಾಜ್ಯಗಳಿಗೆ ವಿದ್ಯುತ್ ಮಾರಾಟಕ್ಕೆ ನಿರ್ಬಂಧ ಶೀಘ್ರ: ಸಚಿವ ಕೆ.ಜೆ.ಜಾರ್ಜ್

Published 3 ಫೆಬ್ರುವರಿ 2024, 10:29 IST
Last Updated 3 ಫೆಬ್ರುವರಿ 2024, 10:29 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಖಾಸಗಿಯವರು ಹೊರ ರಾಜ್ಯಗಳಿಗೆ ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ರೂಪಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

’ರಾಜ್ಯದಲ್ಲಿ ಇವತ್ತಿಗೆ ವಿದ್ಯುತ್ ಅಭಾವ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಅಭಾವ ಬರಬಹುದು. ಹೀಗಾಗಿ ಈ ಕ್ರಮ ಅನಿವಾರ್ಯ‘ ಎಂದು ಶನಿವಾರ ಇಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಸಭೆಗೆ ಮಾಹಿತಿ ನೀಡಿದರು.

ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳು ವಾರ್ಷಿಕ ನಿರ್ವಹಣೆಗಾಗಿ ಇತ್ತೀಚೆಗೆ ಉತ್ಪಾದನೆ ಸ್ಥಗಿತಗೊಳಿಸಿದ್ದವು. ಸಾಮಾನ್ಯವಾಗಿ ರಾಜ್ಯದಲ್ಲಿ ದಿನಕ್ಕೆ 8ರಿಂದ 9 ಸಾವಿರ ಮೆಗಾವ್ಯಾಟ್‌ ಇರುತ್ತಿದ್ದ ವಿದ್ಯುತ್‌ ಬೇಡಿಕೆ ಈ ವೇಳೆ ಏಕಾಏಕಿ 16 ಸಾವಿರ ಮೆಗಾವ್ಯಾಟ್‌ಗೆ ಏರಿಕೆಯಾಗಿತ್ತು. ಅದನ್ನು ನಿಭಾಯಿಸಲು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಜೊತೆಗೆ ರೈತರಿಗೆ 7 ಗಂಟೆ ಕೊಡುತ್ತಿದ್ದ ವಿದ್ಯುತ್‌ ಪ್ರಮಾಣ 5 ಗಂಟೆಗೆ ಇಳಿಸಲಾಗಿತ್ತು. ಈಗ ರೈತರಿಗೆ ಮೊದಲಿನಂತೆಯೇ ವಿದ್ಯುತ್‌ ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಅಭಾವದ ಪರಿಸ್ಥಿತಿ ತಲೆದೋರದಂತೆ ಈಗಲೇ ಎಚ್ಚರಿಕೆ ವಹಿಸುವುದು ಅನಿವಾರ್ಯ ಎಂದರು.

ಒನ್‌ ಟೈಮ್ ಸೆಟಲ್‌ಮೆಂಟ್‌

ಗ್ರಾಮ ಪಂಚಾಯ್ತಿಗಳ ಬಹುತೇಕ ಆದಾಯ ವಿದ್ಯುತ್ ಬಿಲ್ ಕಟ್ಟಲು ಸಾಕಾಗುತ್ತಿದೆ. ಹೀಗಾಗಿ ಬಾಕಿ ಇರುವ ಬಿಲ್ ಮನ್ನಾ ಮಾಡುವಂತೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಸಭೆಯಲ್ಲಿ ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ’ಬಿಲ್‌ ಸಂಪೂರ್ಣ ಮನ್ನಾ ಸಾಧ್ಯವಿಲ್ಲ. ಆದರೆ ಒನ್‌ ಟೈಮ್‌ ಸೆಟಲ್‌ಮೆಂಟ್‌ಗೆ ಅವಕಾಶ ಕೊಟ್ಟು ಬಡ್ಡಿ ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ನಾವು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವಾಗ ಹಣ ಕೊಡದಿದ್ದರೆ ನಮ್ಮನ್ನು (ಕೆಪಿಟಿಸಿಎಲ್‌) ಕಪ್ಪುಪಟ್ಟಿಗೆ ಸೇರಿಸುತ್ತಾರೆ‘ ಎಂದು ಮಾರ್ಮಿಕವಾಗಿ ಹೇಳಿದರು.

ಅಕ್ರಮ–ಸಕ್ರಮ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಲು 4 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಅವು ವಿಲೇವಾರಿಗೆ 4ರಿಂದ 5 ವರ್ಷ ಬೇಕಿದೆ. ನಂತರ ಹೊಸ ಅರ್ಜಿಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಜಾರ್ಜ್ ಪ್ರತಿಕ್ರಿಯಿಸಿದರು.

ಸೋಲಾರ್; ಸಬ್ಸಿಡಿ ಪ್ರಮಾಣ ಶೇ 80ಕ್ಕೆ ಹೆಚ್ಚಳ

’ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಲು ಈ ಮೊದಲು ಶೇ 60ರಷ್ಟು ಇದ್ದ ಸಬ್ಸಿಡಿ ಪ್ರಮಾಣವನ್ನು ಶೇ 80ಕ್ಕೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರ ಶೇ 50 ಹಾಗೂ ಕೇಂದ್ರ ಶೇ 30 ಹಾಗೂ ರೈತರು ಶೇ 20ರಷ್ಟು ಹಣ ಭರಿಸಬೇಕಿದೆ. ಯೋಜನೆಯಡಿ ಪಂಪ್‌ಸೆಟ್‌ ಕೂಡ ವಿತರಿಸಲಾಗುವುದು. 15 ದಿನಗಳಲ್ಲಿ ಈ ಯೋಜನೆಯ ವಿಸ್ತೃತ ಮಾಹಿತಿ ಪ್ರಕಟಿಸಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗುವುದು‘ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

6000 ಲೈನ್‌ಮನ್‌ಗಳ ನೇಮಕ ಶೀಘ್ರ

ಇಂಧನ ಇಲಾಖೆಯಿಂದ 6000 ಸಾವಿರ ಲೈನ್‌ಮನ್‌ಗಳ ನೇಮಕಕ್ಕೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಆಯಾ ವಿದ್ಯುತ್ ಕಂಪೆನಿಗಳ ವ್ಯಾಪ್ತಿಯವರು ಅಲ್ಲಿಯೇ ಅರ್ಜಿ ಸಲ್ಲಿಸಲು ಅನುವಾಗುವಂತೆ ನೇಮಕಾತಿ ನಿಯಮಾವಳಿ ರೂಪಿಸಿ ಶೀಘ್ರ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕರಾದ ಅರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಎಸ್‌.ಎನ್‌.ಚನ್ನಬಸ‍ಪ್ಪ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ ಪಾಂಡೆ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT