ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಲ್ಲು: ಊರು–ಕಾಡು ನಡುವಿನ ಉರುಳುಗಲ್ಲು

ಶಿವಮೊಗ್ಗ–ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ಕೊನೆಯ ಜನವಸತಿ
Published 9 ಜೂನ್ 2023, 15:57 IST
Last Updated 9 ಜೂನ್ 2023, 15:57 IST
ಅಕ್ಷರ ಗಾತ್ರ

ವೆಂಕಟೇಶ ಜಿ.ಎಚ್

ಶಿವಮೊಗ್ಗ: 1905ರಲ್ಲಿ ಇದೊಂದು ಊರು. ಸರ್ಕಾರದ ಲೆಕ್ಕದಲ್ಲಿ ಅವರೆಲ್ಲರೂ ಗ್ರಾಮಸ್ಥರು. ಆದರೆ 2023ರಲ್ಲಿ ಅದು ಊರು ಅಲ್ಲ. ಬದಲಿಗೆ ಕಾಡು. ಅಲ್ಲಿನ ನಿವಾಸಿಗಳೆಲ್ಲರೂ ಅರಣ್ಯ ಅತಿಕ್ರಮಣದಾರರು.. ಹೀಗಾಗಿ ಅವರಿಗೆ ಗೌರವ ಇರಲಿ, ಈ ನೆಲದ ಮಕ್ಕಳು ಎಂಬ ಗುರುತೂ ಇಲ್ಲ..

ಶಿವಮೊಗ್ಗ–ಚಿಕ್ಕಮಗಳೂರು ಜಿಲ್ಲೆಗಳ ಗಡಿಯ ಕೊನೆಯ ಜನವಸತಿ ಬೆಳಗಲ್ಲು ಪರಿಸರದಲ್ಲಿ ಹೀಗೊಂದು ಶೋಚನೀಯ ಪರಿಸ್ಥಿತಿ ಕಾಣಸಿಗುತ್ತದೆ. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕುಗ್ರಾಮ ಭೇಟಿ ಕಾರ್ಯಕ್ರಮದಡಿ ’ಪ್ರಜಾವಾಣಿ‘ ಅಲ್ಲಿಗೆ ತೆರಳಿತ್ತು.

ಬ್ರಿಟಿಷರ ಕಾಲದಲ್ಲೇ ಬೆಳಗಲ್ಲು ಊರು ಆಗಿತ್ತು. ಅಲ್ಲಿನ ಜಮೀನು, ಸೋಗೆಯ ಗುಡಿಸಲಿಗೆ ಖಾತೆ, ಕಿರ್ದಿ ಮಾಡಿಕೊಡಲಾಗಿತ್ತು. ಅದೇ ಸ್ಥಾನಮಾನ ಕಳೆದ 30 ವರ್ಷಗಳವರೆಗೂ ಇತ್ತು. 1992ರಲ್ಲೂ ಇಲ್ಲಿನ ನಿವಾಸಿಗಳು ಮೇಲ್ಛಾವಣಿ ಕಂದಾಯ ಕಟ್ಟಿದ್ದಾರೆ. ಆದರೆ ತುಂಗಾ ಜಲಾಶಯ ಕಟ್ಟಿದಾಗ ಹಿನ್ನೀರಿನಲ್ಲಿ ಇಲ್ಲಿನವರ ಜಮೀನು ಮುಳುಗಡೆ ಆಗಿದೆ. ಹಿಂದೆ ನಾವೂ ಕಂದಾಯ ಗ್ರಾಮದಲ್ಲಿದ್ದೆವು ಎಂದು ತಮ್ಮ ನೆಲೆಗೆ ಬಂದವರಿಗೆ ಹಳೆಯ ರಶೀದಿ ತೋರಿಸುತ್ತಾ ಊರು–ಕಾಡಿನ ದ್ವಂದ್ವದಲ್ಲೇ ನಿವಾಸಿಗಳು ಬದುಕುತ್ತಿದ್ದಾರೆ.

ಬೆಳಗಲ್ಲ ನಿವಾಸಿಗಳೆಲ್ಲರೂ ಪರಿಶಿಷ್ಟ ಜಾತಿಯ ಆದಿ ದ್ರಾವಿಡರು. ಇಲ್ಲಿ 18 ಕುಟುಂಬಗಳಿದ್ದು, ಸೋಗೆ, ನಾಡ ಹೆಂಚಿನ ಮನೆಗಳಲ್ಲಿ ವಾಸ. ಅವರ ನೆಲೆಗೆ ರಸ್ತೆ ಇಲ್ಲ. ಚರಂಡಿ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಗೊತ್ತೇ ಇಲ್ಲ. ಮಳೆಗಾಲದಲ್ಲಿ ಇವರ ಪಾಡು ಹೇಳತೀರದು. 10 ವರ್ಷಗಳ ಹಿಂದೆ ಆಗಿನ ಶಾಸಕ ಕಿಮ್ಮನೆ ರತ್ನಾಕರ ಅವರ ಆಸಕ್ತಿಯಿಂದ ಇಲ್ಲಿಗೆ ವಿದ್ಯುತ್ ಲೈನ್ ಎಳೆಯಲಾಗಿದೆ. ಹೀಗಾಗಿ ಬೆಳಕು ಕಂಡಿದ್ದಾರೆ.

ಹಿಂಬದಿಯೇ ತುಂಗೆಯ ಹಿನ್ನೀರು ಮೈ ಚಾಚಿದ್ದರೂ ಇವರಿಗೆ ಸರ್ಕಾರ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಹಿನ್ನೀರ ನೀರನ್ನೇ ತಂದು ಕುಡಿಯುತ್ತಾರೆ. ಹಿನ್ನೀರಲ್ಲಿ ಬೇಸಿಗೆಯಲ್ಲಿ ನಿಂತ ನೀರು, ಮಳೆಗಾಲದಲ್ಲಿ ಕೆಂಪಡರಿದ ನೀರು ರೋಗ–ರುಜಿನಿಗೂ ಆಹ್ವಾನ ನೀಡುತ್ತವೆ.

18 ಕುಟುಂಬಗಳಲ್ಲಿ 20ಕ್ಕೂ ಹೆಚ್ಚು ಮಕ್ಕಳು ಇದ್ದು, ಅಂಗನವಾಡಿಯಿಂದ ಮೊದಲುಗೊಂಡು ಹೈಸ್ಕೂಲ್‌ವರೆಗೆ ಕಲಿಯಲು ನಾಲ್ಕು ಕಿ.ಮೀ ದೂರದ ಕೊರಲಕೊಪ್ಪ ಇಲ್ಲವೇ ದೂರದ ಉಂಬ್ಳೆಬೈಲಿನತ್ತ ಹೆಜ್ಜೆ ಹಾಕಬೇಕಿದೆ. ಮಳೆಗಾಲದಲ್ಲಿ ಈ ಮಕ್ಕಳ ಸ್ಥಿತಿ ದೇವರಿಗೆ ಪ್ರೀತಿ. ನಿವಾಸಿಗಳು ಉಪ್ಪು,ಸೊಪ್ಪು, ಹಾಲು ಬೇಕಿದ್ದರೂ ನಾಲ್ಕು ಕಿ.ಮೀ ನಡೆಯಬೇಕು.

ಇಲ್ಲಿನ ನಿವಾಸಿಗಳೆಲ್ಲರೂ ಕೂಲಿ ಕಾರ್ಮಿಕರು. ಮಕ್ಕಳು, ಮುದುಕರ ಹೊರತಾಗಿ ಹೆಣ್ಣು–ಗಂಡು ಎಲ್ಲರೂ ಕೆಲಸಕ್ಕೆ ಹೋಗುತ್ತಾರೆ. ’ನಮ್ಮ ಸಂಕಷ್ಟ ಕಂಡು ನಮ್ಮ ಮಕ್ಕಳಿಗೆ ಯಾರೂ ಹೆಣ್ಣು ಕೊಡೊಲ್ಲ. ಊರಿನಲ್ಲೇ ಸಂಬಂಧದಲ್ಲಿ ನೋಡಿ ಮಾಡಿಕೊಳ್ಳುತ್ತೇವೆ‘ ಎಂದು ಹಿರಿಯರಾದ ಬಸವರಾಜ ಹೇಳುತ್ತಾರೆ.

ಬೆಳಗಲ್ಲಿಗೆ ರಸ್ತೆ ಸಂಪರ್ಕ ಕುಡಿಯುವ ನೀರು ಸಂಚಾರಿ ಚಿಕಿತ್ಸಾಲಯ ಅಂಗನವಾಡಿ ನ್ಯಾಯಬೆಲೆ ಆಂಗಡಿ ತೆರೆಯುವ ಜೊತೆ ಮನೆಗಳಿಗೆ ಹಕ್ಕು ಪತ್ರ ಕೊಡಲು ಜಿಲ್ಲಾಡಳಿತ ಮುಂದಾಗಲಿ.
-ದುಗ್ಗಪ್ಪಗೌಡ ಎಪಿಎಂಸಿ ಮಾಜಿ ಅಧ್ಯಕ್ಷರು
ಅರಣ್ಯ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಅಗತ್ಯ ಮೂಲ ಸೌಲಭ್ಯಗಳ ಒದಗಿಸಬೇಕು.
-ಅರವಿಂದ್ ಗ್ರಾ.ಪಂ ಸದಸ್ಯ ಉಂಬ್ಳೆಬೈಲು

ಬೆಳಗಲ್ಲು: ಮೊದಲ ಪದವೀಧರೆ ಶ್ವೇತಾ..

ಈ ಎಲ್ಲ ಸಂಕಷ್ಟಗಳ ನಡುವೆ ಬೆಳಗಲ್ಲದ ಶ್ವೇತಾ ಬಿಎಸ್ಸಿ ಪದವಿ ಮುಗಿಸಿದ್ದಾರೆ. ಶತಮಾನಗಳ ಐತಿಹ್ಯದ ಈ ನೆಲೆಯಲ್ಲಿ ಮೊದಲ ಪದವೀಧರಳು ಎಂಬ ಆಕೆಯ ಶ್ರೇಯ ನಿವಾಸಿಗಳಲ್ಲೂ ಸಂಭ್ರಮ ಮೂಡಿಸಿದೆ. ಬೆಳಗಲ್ಲ ನೆಲೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಐದು ವರ್ಷಕ್ಕೊಮ್ಮೆ ಚುನಾವಣೆ ಬಂದಾಗ ಶಾಸಕರ ಕಾಣುತ್ತೇವೆ. ಯಾರಿಗಾದರೂ ಜಡ್ಡು (ಜ್ವರ) ಜಾಪತ್ರೆ ಬಂದರೆ 15 ಕಿ.ಮೀ  ದೂರದ ಎನ್.ಆರ್.ಪುರ ತಾಲ್ಲೂಕಿನ ಮುತ್ತಿನಕೊಪ್ಪಕ್ಕೆ ಹೋಗಬೇಕು. ಮಳೆಗಾಲ ಬಂದರೆ ತುಂಗೆಯ ಸದ್ದಿನಲ್ಲೇ ನಮ್ಮ ಅಳಲು ಅಡಗುತ್ತದೆ ಎಂದು 92 ವರ್ಷ ವಯಸ್ಸಿನ ಕುಂದ್ರಮ್ಮ ಹೇಳುತ್ತಾರೆ. ’ಆಧಾರ್ ರೇಷನ್ ಕಾರ್ಡ್ ಮತದಾರರ ಗುರುತಿನ ಚೀಟಿ ಮಾತ್ರ ಇವರ ನೆಲದ ನಂಟನ್ನು ದೃಢೀಕರಿಸುತ್ತವೆ. ಪಡಿತರ ತರಲು 13 ಕಿ.ಮೀ. ದೂರದ ಉಂಬ್ಳೆಬೈಲಿಗೆ ಹೋಗಬೇಕಿದೆ. ನಮ್ಮ ನೆಲೆಯಲ್ಲಿ ಕನಿಷ್ಟ ಅಂಗನವಾಡಿಯಾದರೂ ಸರ್ಕಾರ ತೆರೆಯಲಿ. ಆಡುವ ಮಕ್ಕಳು ಜೀವ ಪಡೆಯುತ್ತವೆ‘ ಎಂದು ಚೌಡಪ್ಪ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT