ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಣಂದೂರು: ಭೂ ತಾಯಿಗೆ ಕೃತಜ್ಞತೆ ಸಲ್ಲಿಸುವ ‘ಭೂಮಿ ಹುಣ್ಣಿಮೆ’ ಹಬ್ಬ

ಕೆಮ್ಮಣ್ಣು ಲೇಪಿತ ಬಿದಿರಿನ ಭೂ ಮಣ್ಣಿ ಕುಕ್ಕೆಗೆ ಹಸೆ ಚಿತ್ತಾರದ ಮೋಹಕ ಎಳೆಗಳ ಸೊಬಗು
Last Updated 9 ಅಕ್ಟೋಬರ್ 2022, 7:08 IST
ಅಕ್ಷರ ಗಾತ್ರ

ಕೋಣಂದೂರು: ದಸರಾ ಸಡಗರ ಮುಗಿಯುತ್ತಿದ್ದಂತೆ ಬರುವ ಹುಣ್ಣಿಮೆಯೇ ಭೂಮಿ ಹುಣ್ಣಿಮೆ. ಇದು ಭೂ ತಾಯಿಗೆ ಕೃತಜ್ಞತೆ ಸಲ್ಲಿಸುವ ಕೃಷಿಕರ ಹಬ್ಬ.

ಕಾಡಿನಲ್ಲಿ ಬೆಳೆದ ಮದ್ದರಸ ಎಂಬ ಹಾಲಿನ ಜಾತಿಯ ಒಂದೇ ಮರದ ಮೂರು ಕೋಲುಗಳು, ಒಂದನ್ನು ಅಡ್ಡವಾಗಿ, ಇನ್ನೆರಡನ್ನು ಆಸರೆಗೆ ಇಡಲಾಗುತ್ತದೆ. ಮಾವಿನೆಲೆ, ಎಳೆ ಬಾಳೆ ಕಂಬದ ಕಮಾನು ಮಂಟಪ ಸಿದ್ಧವಾಗುತ್ತದೆ. ಸಗಣಿಯಿಂದ ಸಾರಿಸಿದ ಗದ್ದೆಯಂಚಿನ ಓರಣ ನೆಲ, ಜೇಡಿ, ಕೆಮ್ಮಣ್ಣು ಲೇಪಿತ ಬಿದಿರಿನ ಭೂ ಮಣ್ಣಿ ಕುಕ್ಕೆ, ಅದರ ಸುತ್ತ ಹಸೆ ಚಿತ್ತಾರದ ಮೋಹಕ ಎಳೆಗಳ ಸೊಬಗು ಈ ಹಬ್ಬದ ವೈಶಿಷ್ಟ್ಯ.

ಭೂಮಣ್ಣಿ ಎಂಬ ನಿಸರ್ಗದ ಹಬ್ಬಕ್ಕೆ ಸಿದ್ಧತೆ ಶುರುವಾಗುವುದು ಹಿಂದಿನ ದಿನ. ತುಳಸಿ, ಪತ್ರೆ, ಹಿಂಗಾರ ತೆನೆ, ಚೆಂಡು ಹೂಗಳ ನೈಸರ್ಗಿಕ ಅಲಂಕಾರ. ಗಿಡಗಂಟಿಗಳ ಆಯ್ದ ಸಾವಿರದ ಸೊಪ್ಪು ಪದಾರ್ಥ, ಅಮಟೆಕಾಯಿಗೆ ಬೆಲ್ಲ ಬೆರೆಸಿ ಬೇಯಿಸಿ ಮಾಡಿದ ಲೇಹ್ಯ, ಬಗೆ ಬಗೆಯ ತಿಂಡಿ ತಿನಿಸುಗಳಿಂದ ತುಂಬಿದ ಎಡೆಯಿಂದ ಭೂ ತಾಯಿಗೆ ಸೀಮಂತದ ಅಡುಗೆ ಮಾಡಿ ನೈವೇದ್ಯ ಮಾಡುತ್ತಾರೆ.

‘ಬೆಳಗಿನ ಜಾವದಲ್ಲೇ ಭೂಮಿ ತಾಯಿ ಊಟ ಮಾಡು ಬಾ’ ಎಂದು ಬೆಂಕಿಯ ದೊಂದಿ ಹಿಡಿದು ಭೂ ತಾಯಿಯನ್ನು ಕರೆಯುವ ಸದ್ದು ಊರ ತುಂಬೆಲ್ಲ ಕೇಳಿಸುವ ಅಪರೂಪದ ಆಚರಣೆಯೇ ಭೂಮಿ ಹುಣ್ಣಿಮೆ ಹಬ್ಬ.

ಗ್ರಾಮ ಸಂಸ್ಕೃತಿಯ ನೈಜ ಸೊಬಗಿದು. ಅನ್ನ ಬೆಳೆವ ರೈತ ಭೂಮಿ ತಾಯಿಗೆ ಉಣ ಬಡಿಸುವ ಸೀಮಂತದೂಟ. ಫಸಲಿಗೆ ಮುತ್ತೈದೆಯರು ತಮ್ಮ ಕುತ್ತಿಗೆಯಲ್ಲಿದ್ದ ತಾಳಿಯನ್ನು ಸಹ ಅಲಂಕರಿಸಿ, ನಂತರ ತಾವು ಧರಿಸಿ ಸಂಭ್ರಮಿಸುವ ಅಪರೂಪದ ಘಳಿಗೆ ಇದು. ರಾತ್ರಿಯೆಲ್ಲ ನಿದ್ದೆ ಬಿಟ್ಟು ತಯಾರಿಸಿದ ಕೊಟ್ಟೆ ಕಡುಬನ್ನು ಗದ್ದೆಯಲ್ಲಿ ಹೂತಿಡಲಾಗುತ್ತದೆ. ಕಟಾವಿನ ಸಂದರ್ಭದಲ್ಲಿ ಅದನ್ನು ಕಿತ್ತು ತಂದು ಅದರಿಂದ ತಯಾರಿಸಿದ ರೊಟ್ಟಿಯನ್ನು ಪರಸ್ಪರ ಹಂಚಿಕೊಂಡು ತಿನ್ನುವುದು ಪರಿಪಾಠ.

ರೈತ ತನ್ನನ್ನು ಪೊರೆವ ಪ್ರಕೃತಿಗೂ ತನ್ನಂತೆ ಜೀವವಿದೆ ಎಂದು ಭಾವಿಸಿ ಆರಾಧಿಸಿ ನಮಿಸುವ ಹಬ್ಬ. ಆಧುನಿಕತೆಯ ಅಬ್ಬರದ ಖರ್ಚುಗಳಿಗೆ ಅಪವಾದ ಎಂಬಂತಿರುವ ಈ ಹಬ್ಬ ಗ್ರಾಮೀಣರ ಪಾಲಿನ ಸಾರ್ಥಕ ಹಬ್ಬ. ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ತಾವು ಸಿದ್ಧಪಡಿಸಿದ ಎಡೆಯನ್ನು ಸೇವಿಸಿ, ನಂತರ ಭೂಮಿದಾರವನ್ನು ಕೈಗೆ ಕಟ್ಟಿಕೊಂಡು ಸಂಭ್ರಮಿಸುತ್ತಾರೆ. ಈ ಹಬ್ಬದಂದು ರಾತ್ರಿ ವೇಳೆ ಮಹಿಳೆಯರು ನಿದ್ದೆ ಮಾಡಿದಲ್ಲಿ ಅವರ ಗದ್ದೆಯ ಫಸಲು ಜೊಳ್ಳಾಗುತ್ತದೆ ಎಂಬುದು ಗ್ರಾಮೀಣರ ನಂಬಿಕೆ.

ಬದಲಾದ ಕಾಲಮಾನದಲ್ಲಿ ಪ್ರತಿ ವರ್ಷ 400ರಿಂದ 500 ಹೆಕ್ಟೇರ್ ಭತ್ತದ ಗದ್ದೆಗಳು ಅಡಿಕೆ, ನೀಲಗಿರಿ ತೋಪುಗಳಾಗಿ ಮಾರ್ಪಡುತ್ತಿವೆ. ಭೂಮಿ ಪೂಜೆ ನೆಪದಲ್ಲಿ ಭತ್ತದ ಗದ್ದೆಗಳು ಇಂದಿಗೂ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವುದು ಸಮಾಧಾನಕರ ಸಂಗತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT