ಶಿವಮೊಗ್ಗ: ಮೈಸೂರಿನ ಮುಡಾ ಹಗರಣದ ವಿಚಾರದಲ್ಲಿ ಸಹೋದರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ಯಶಸ್ಸು ಸಹಿಸಲಾರದೇ ಶಿವಮೊಗ್ಗದಲ್ಲಿ ನಮ್ಮ ಕುಟುಂಬದ ವಿರುದ್ಧ ಕೆಪಿಸಿಸಿ ವಕ್ತಾರರು ದಿನಬಿಟ್ಟು ದಿನ ಸುಳ್ಳು ಆರೋಪಗಳ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ವರ್ತಮಾನದಲ್ಲಿ ನಾನೂ ಇದ್ದೇನೆ ಎಂದು ತೋರಿಸಲು ಕೆಪಿಸಿಸಿ ವಕ್ತಾರರು ಹೀಗೆ ಹಗುರವಾಗಿ ಮಾತನಾಡುವುದು ಸಲ್ಲ. ಅವರ ಆರೋಪಗಳಿಗೆ ತೂಕ ಎಷ್ಟಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಜನರೇ ಉತ್ತರ ಕೊಟ್ಟಿದ್ದಾರೆ ಎಂದು ಆಯನೂರು ಮಂಜುನಾಥ್ ಹೆಸರು ಉಲ್ಲೇಖಿಸದೇ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ಪದೇ ಪದೇ ಸುಳ್ಳು ಹೇಳಿ ಅದನ್ನು ಸತ್ಯ ಮಾಡಲು ಹೊರಟಿರುವ ಕೆಪಿಸಿಸಿ ವಕ್ತಾರರ ತಂತ್ರಕ್ಕೆ ತಲೆಕಡಿಸಿಕೊಳ್ಳುವುದಿಲ್ಲ. ಶಿವಮೊಗ್ಗದಲ್ಲಿ ನಾಲ್ಕನೇ ಬಾರಿಗೆ ಜನರು ನನಗರ ಆಶೀರ್ವಾದ ಮಾಡಿದ್ದಾರೆ. ಮಾತು ಕಡಿಮೆ ಇರಲಿ, ಕೆಲಸ ಹೆಚ್ಚಿರಲಿ ಎಂಬಂತೆ ಇನ್ನು ಮುಂದೆ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಕೊಡುವೆ ಎಂದರು.
‘ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಬಿಜೆಪಿಯಲ್ಲಿದ್ದಾಗ ಜೂಲು ನಾಯಿ ಎಂದು ಕರೆದಿದ್ದರು. ಪತ್ನಿ ಗೀತಾ ಪರ ನಟ ಶಿವರಾಜಕುಮಾರ್ ಪ್ರಚಾರಕ್ಕೆ ಬಂದಾಗ ಅವರದ್ದು ಕರಡಿ ಕುಣಿತ ಎಂದು ಲೇವಡಿ ಮಾಡಿದ್ದರು. ಈಗ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪಕ್ಕದಲ್ಲಿಯೇ ಕುಳಿತುಕೊಳ್ಳುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥೌಡ ಬಗ್ಗೆಯೂ ಈ ಹಿಂದೆ ಮಲ್ಯ ಅವರ ಪಕ್ಷದಲ್ಲಿದ್ದಾಗ, ಜೆಡಿಎಸ್‌ನಲ್ಲಿದ್ದಾಗ, ಬಿಜೆಪಿಯಲ್ಲಿದ್ದಾಗ ಏನು ಮಾತಾಡಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ’ ಎಂದು ಆಯನೂರು ವಿರುದ್ಧ ಹರಿಹಾಯ್ದ ಬಿ.ವೈ.ರಾಘವೇಂದ್ರ, ಈಗ ನಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪಗಳ ಮಾಡುವುದು ಬಿಡಿ’ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶಿವರಾಜ್, ಬಿ.ಕೆ.ಶ್ರೀನಾಥ್, ಹರಿಕೃಷ್ಣ ಹಾಗೂ ಪ್ರಮುಖರಾದ ವಿಜಯೇಂದ್ರ, ಅಣ್ಣಪ್ಪ, ಚಂದ್ರಶೇಖರ್, ಶ್ರೀನಾಗ್, ಮಾಲತೇಶ್, ಬಸವರಾಜ್ ಉಪಸ್ಥಿತರಿದ್ದರು.
‘ಸಂದರ್ಭ ಬಂದಾಗ ಉತ್ತರ ಕೊಡುವೆ’ ‘
ರುದ್ರೇಗೌಡರಿಗೆ ಎಂಪಿ ಟಿಕೆಟ್ ತಪ್ಪಿಸಿ ಯಡಿಯೂರಪ್ಪ ತಮ್ಮ ಪುತ್ರನಿಗೆ ಕೊಡಿಸಿದ್ದರು’ ಎಂದು ಆಯನೂರು ಮಂಜುನಾಥ್ ಮಾಡಿದ್ದ ಆರೋಪಕ್ಕೆ ಸಂದರ್ಭ ಬಂದಾಗ ಉತ್ತರ ಕೊಡುವೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಮಾಜಿ ಶಾಸಕ ಎಸ್.ರುದ್ರೇಗೌಡ ಪ್ರತಿಕ್ರಿಯಿಸಿದರು. ಇದು ಪಕ್ಷದ ವಿಷಯ. ಅದರಲ್ಲೂ 2011ರ ವಿಚಾರ ಈಗೇಕೆ. ಇಲ್ಲಿ ಯಾರನ್ನೂ ಯಾರ ಮೇಲೂ ಎತ್ತಿಕಟ್ಟುವುದಲ್ಲ. ಪಕ್ಷ ಯಾರಿಗೆ ಬೇಕಾದರೂ ಟಿಕೆಟ್ ಕೊಡಬಹುದು. ಇದರಲ್ಲಿ ವೈಯಕ್ತಿಕ ಸಂಗತಿ ತರುವುದು ಬೇಡ. ಆ ಸಂದರ್ಭದಲ್ಲಿ ಗೆಲ್ಲುವ ಶಕ್ತಿ ಇರುವವರಿಗೆ ಟಿಕೆಟ್ ಕೊಡಬೇಕು ಎಂದು ಪಕ್ಷ ತೀರ್ಮಾನ ಕೈಗೊಂಡಿರಬಹುದು. ಅದನ್ನು ಗೌರವಿಸಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.