ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿಜಯಸಂಕಲ್ಪ ಅಭಿಯಾನ 21ರಿಂದ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಮಾಹಿತಿ
Last Updated 19 ಜನವರಿ 2023, 6:01 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಜೆಪಿಯಿಂದ ಜ. 21ರಿಂದ 29ರವರೆಗೆ ವಿಜಯಸಂಕಲ್ಪ ಅಭಿಯಾನ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಅಭಿಯಾನದ ಮೂಲಕ ಜನಸಾಮಾನ್ಯರನ್ನು ತಲುಪುವ ಪ್ರಯತ್ನ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಮನೆಮನೆಗೆ ತಲುಪಿಸುವ ಆಶಯ ಕೂಡ ಇದರಲ್ಲಿದೆ. ಇದಕ್ಕಾಗಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ಜ. 21ರಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಇದೊಂದು ಸರ್ವಸ್ಪರ್ಶಿ ಕಾರ್ಯಕ್ರಮವಾಗಿದ್ದು, 2 ಕೋಟಿ ಮತದಾರರನ್ನು ಅಭಿಯಾನದ ಮೂಲಕ ತಲುಪುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಈಗಾಗಲೇ ಜಿಲ್ಲಾ ಮತ್ತು ಮಂಡಳಗಳಲ್ಲಿ ಸಭೆ ನಡೆಸಲಾಗಿದೆ. ಮನೆಮನೆಗೆ ತೆರಳಿ ಕರಪತ್ರ ಹಂಚುವುದು, ಬಿಜೆಪಿಯ ಸ್ಟಿಕ್ಕರ್ ಅಂಟಿಸುವುದು. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಅನುಮತಿ ಪಡೆದು ಗೋಡೆಗಳು ಮತ್ತು ವಾಹನಗಳ ಮೇಲೂ ಸ್ಟಿಕ್ಕರ್ ಅಂಟಿಸಲಾಗುವುದು. ಜೊತೆಗೆ ಸಾಧನೆಗಳ ಮಾಹಿತಿ ನೀಡುವ ಗೋಡೆ ಪೇಂಟಿಂಗ್ ಕೂಡ ಮಾಡಲಾಗುವುದು
ಎಂದರು.

‘ಪ್ರತಿ ಮನೆಯಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳಿದ್ದಾರೆ. ಅವರನ್ನು ಗುರುತಿಸಿ ಅವರೊಂದಿಗೆ ಸಮಾಲೋಚನೆ ನಡೆಸುವುದು ಅಭಿಯಾನದ ಮತ್ತೊಂದು ಉದ್ದೇಶವಾಗಿದೆ. ಹಾಗೆಯೇ ಜ. 29ರಂದು ‘ಮನ್ ಕೀ ಬಾತ್’ ಕಾರ್ಯಕ್ರಮ ರಾಜ್ಯದ ಪಾಲಿಗೆ ಮತ್ತಷ್ಟು ವಿಶೇಷವಾಗಲಿದೆ. ಪಕ್ಷದ ಕಾರ್ಯಕರ್ತರು ಮತ್ತು ಪ್ರಮುಖರು ಒಟ್ಟಿಗೆ ಕುಳಿತು ಈ ಕಾರ್ಯಕ್ರಮ ಆಲಿಸಲಿದ್ದಾರೆ. ಬೂತ್ ಮಟ್ಟದಿಂದಲೇ ಈ ಕಾರ್ಯಕ್ರಮ ನಡೆಯಲಿದೆ’ ಎಂದರು.

ಪ್ರಮುಖರಾದ ಬಿ.ಕೆ. ಶ್ರೀನಾಥ್, ಎಸ್. ದತ್ತಾತ್ರಿ, ಮಧುಸೂದನ್ ಬಿ.ಆರ್., ಶಿವರಾಜ್, ರತ್ನಾಕರ ಶೆಣೈ, ಕೆ.ವಿ. ಅಣ್ಣಪ್ಪ ಇದ್ದರು.

ಟಿಕೆಟ್ ಆಕಾಂಕ್ಷಿಯಲ್ಲ: ಮೇಘರಾಜ್

‘ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಾನು ಟಿಕೆಟ್ ಆಕಾಂಕ್ಷಿಯಲ್ಲ’ ಎಂದು ಮೇಘರಾಜ್ ಹೇಳಿದರು.

ಜಿಲ್ಲೆಯಲ್ಲಿ ಜ. 2ರಿಂದ 12ರವರೆಗೆ ನಡೆದ ಬೂತ್ ವಿಜಯ್ ಅಭಿಯಾನ ಯಶಸ್ವಿಯಾಗಿದೆ. ಅದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.

ನೋಂದಣಿಗೆ 8000090009 ಮಿಸ್ಡ್‌ ಕಾಲ್..

ಪಕ್ಷದ ಸದಸ್ಯತ್ವ ಅಭಿಯಾನದ ಅಂಗವಾಗಿ ಮಿಸ್ಡ್‌ಕಾಲ್‌ ಮೂಲಕ ಸದಸ್ಯತ್ವವನ್ನು ಮುಂದುವರಿಸಲಾಗುವುದು. ನೋಂದಣಿ ಕೂಡ ಮಾಡಲಾಗುವುದು. ನೋಂದಣಿ ಪ್ರಕ್ರಿಯೆಗೆ ಕಾರ್ಯಕರ್ತರಿಗೆ ಈಗಾಗಲೇ ಕಾರ್ಯಾಗಾರ ಕೂಡ ನಡೆಸಲಾಗಿದೆ. ನೋಂದಣಿಗಾಗಿ 8000090009 ಈ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT