ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾಳಕೊಪ್ಪ | ಸಂತೆಯಲ್ಲಿ ಸ್ಫೋಟ: ಇಬ್ಬರಿಗೆ ಗಾಯ

ಕಾಡು ಪ್ರಾಣಿಗಳಿಗೆ ಇಡಲು ಸ್ಫೋಟಕ ಖರೀದಿ ಸಾಧ್ಯತೆ: ಎಸ್‌ಪಿ ಹೇಳಿಕೆ
Published 18 ಫೆಬ್ರುವರಿ 2024, 16:21 IST
Last Updated 18 ಫೆಬ್ರುವರಿ 2024, 16:21 IST
ಅಕ್ಷರ ಗಾತ್ರ

ಶಿರಾಳಕೊಪ್ಪ (ಶಿವಮೊಗ್ಗ): ಪ್ರತಿ ವಾರ ನಡೆಯುವ ಇಲ್ಲಿನ ಸಂತೆಗೆ ಬಂದಿದ್ದ ದಂಪತಿ ಅಂಗಡಿಯೊಂದರಲ್ಲಿ ಇರಿಸಿದ್ದ ಚೀಲದಲ್ಲಿನ ವಸ್ತು ಸ್ಫೋಟಗೊಂಡು ಇಬ್ಬರಿಗೆ ಗಾಯಗಳಾಗಿರುವ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

ಜಮೀನಿನಲ್ಲಿನ ಬೆಳೆ ತಿನ್ನಲು ಬರುವ ಕಾಡು ಪ್ರಾಣಿಗಳಿಗೆ ಇಡುವ ಉದ್ದೇಶದಿಂದ ಸ್ಫೋಟಕ ಖರೀದಿಸಿ ಚೀಲದಲ್ಲಿ ಇರಿಸಿರಬಹುದು. ಅದೇ ಚೀಲದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತೆಗೆ ಬಂದಿದ್ದ ದಂಪತಿ ಅಂಗಡಿಯೊಂದರಲ್ಲಿ ಎರಡು ಬೆಡ್‌ಶೀಟ್‌ ಖರೀದಿಸಿ ಚೀಲವನ್ನು ಅಲ್ಲೇ ಇಟ್ಟಿದ್ದರು. ನಂತರ ಮತ್ತಿಬ್ಬರನ್ನು ಕರೆತಂದು, ಅವರ ಚೀಲವನ್ನೂ ಇರಿಸಿ ನೋಡಿಕೊಳ್ಳುವಂತೆ ಹೇಳಿಹೋಗಿದ್ದರು.

ಅಂಗಡಿ ಮಾಲೀಕ ಅಂಥೋನಿ ಅವರ ಕಾಲು ಆ ಚೀಲಕ್ಕೆ ಬಡಿದು ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಅಂಥೋನಿ ಹಾಗೂ ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಅಂಥೋನಿ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡ ಇನ್ನೊಬ್ಬ ವ್ಯಕ್ತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ. ಅವರ ಗುರುತು ಪತ್ತೆಯಾಗಿಲ್ಲ.

ಸ್ಫೋಟದ ಸದ್ದಿಗೆ ಸಾರ್ವಜನಿಕರು ಗಾಬರಿಯಿಂದ ಸಂತೆ ಸ್ಥಳದಿಂದ ಓಡಿ ಹೋದರು. ಜನರಲ್ಲಿ ಆತಂಕ ಉಂಟಾದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ನಂತರ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

‘ಕಾಡು ಹಂದಿ ಸೇರಿದಂತೆ ಇತರ ಪ್ರಾಣಿಗಳಿಗೆ ಇರಿಸಲು ಸ್ಫೋಟಕ ಖರೀದಿಸಿ ಈ ಚೀಲದಲ್ಲಿ ಇಟ್ಟಿರುವ ಸಾಧ್ಯತೆ ಇದ್ದು, ಅದೇ ಚೀಲ ಸ್ಫೋಟಿಸಿದೆ. ಉಮೇಶ ಮತ್ತು ರೂಪಾ ಎಂಬುವವರಿಗೆ ಸೇರಿರುವ ಆಧಾರ್‌ ಕಾರ್ಡ್‌ಗಳು ಚೀಲದಲ್ಲಿ ಸಿಕ್ಕಿವೆ. ಅವರ ಪತ್ತೆಗೆ ಶೋಧ ನಡೆದಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್‌ ತಿಳಿಸಿದ್ದಾರೆ.

ಶಿರಾಳಕೊಪ್ಪದಲ್ಲಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು
ಶಿರಾಳಕೊಪ್ಪದಲ್ಲಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT