ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 25ಕ್ಕೆ ‘ಹಸಿರು ಹಾದಿಯ ಕಥನ’ ಪುಸ್ತಕ ಬಿಡುಗಡೆ

ಎಚ್‌.ಆರ್‌. ಬಸವರಾಜಪ್ಪ ಮಾಹಿತಿ
Last Updated 22 ಮೇ 2022, 2:48 IST
ಅಕ್ಷರ ಗಾತ್ರ

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಮೇ 25ರಂದು ಬೆಳಿಗ್ಗೆ 10ಕ್ಕೆ ರೈತ ಸಂಘದ ಮುಖಂಡ ಎಚ್.ಆರ್. ಬಸವರಾಜಪ್ಪ ಅವರ ಐದು ದಶಕಗಳ ರೈತ ಹೋರಾಟ ಕುರಿತ ‘ಹಸಿರು ಹಾದಿಯ ಕಥನ’ ಪುಸ್ತಕ ಹಾಗೂ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೃತಿ ಬಿಡುಗಡೆ ಮಾಡುವರು. ಜಿಲ್ಲಾಧಿಕಾರಿ ಡಾ.ಆರ್‌. ಸೆಲ್ವಮಣಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡುವರು. ನಿವೃತ್ತ ನ್ಯಾಯಧೀಶರಾದ ಎಚ್‌.ಎನ್‌. ನಾಗಮೋಹನ್ ದಾಸ್ ಕೃತಿ ಪರಿಚಯ ಮಾಡುವರು. ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು ಎಂದು ಕೃತಿಯ ಲೇಖಕ, ರೈತ ಮುಖಂಡ ಎಚ್‌.ಆರ್‌. ಬಸವರಾಜಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೈತ ಮುಖಂಡರಾದ ಕಡಿದಾಳ್ ಶಾಮಣ್ಣ, ಡಾ.ಬಿ.ಎಂ. ಚಿಕ್ಕಸ್ವಾಮಿ ಅವರನ್ನು ಸನ್ಮಾನಿಸಲಾಗುವುದು. ಹಿರಿಯ ಹೋರಾಟಗಾರ್ತಿ ಅನಸೂಯಮ್ಮ, ದಲಿತ ಸಂಘರ್ಷ ಸಮಿತಿಯ ಟಿ.ಎಚ್. ಹಾಲೇಶಪ್ಪ, ಕರ್ನಾಟಕ ಜನಶಕ್ತಿಯ ಕೆ.ಎಲ್. ಅಶೋಕ್, ಪತ್ರಕರ್ತರಾದ ವೀರಭದ್ರಪ್ಪ ಬಿಸ್ಲಳ್ಳಿ, ಗಿರೀಶ್ ತಾಳಿಕಟ್ಟೆ ಭಾಗವಹಿಸುವರು ಎಂದು ವಿವರ ನೀಡಿದರು.

‘ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಕರ್ನಾಟಕ ರಾಜ್ಯದಲ್ಲಿ ಸಾಗಿ ಬಂದ ಹೋರಾಟದ ಚಿತ್ರಣವನ್ನು ಶಿವಮೊಗ್ಗ ಜಿಲ್ಲೆಯ ಕೇಂದ್ರವಾಗಿಟ್ಟುಕೊಂಡು ಈ ಪುಸ್ತಕ ಬರೆದಿದ್ದೇನೆ. ಶಿವಮೊಗ್ಗ ಜಿಲ್ಲೆಯಲ್ಲಿ ರೈತ ಸಂಘದ ಜತೆಗೆ ಕಾಗೋಡು ಚಳವಳಿ, ದಲಿತ ಚಳವಳಿ ಸೇರಿ ಹಲವು ಹೋರಾಟಗಳು ನಡೆದಿವೆ. ಇದನ್ನು ಕೂಡ ಪೂರಕವಾಗಿ ಉಲ್ಲೇಖಿಸಿರುವೆ. ಇಲ್ಲಿ ಯಾವುದನ್ನೂ ಮರೆಮಾಚಿಲ್ಲ. ರೈತ ಸಂಘದಲ್ಲಿ ತಪ್ಪಿದ ಹೆಜ್ಜೆಗಳ ಗುರುತು, ಇಬ್ಭಾಗ, ವಿಚಾರದ ಭಿನ್ನಾಭಿಪ್ರಾಯಗಳು, ರಾಜಕೀಯದ ವಿಷಯಗಳು ಎಲ್ಲವೂ ಇವೆ. ನನ್ನ ತಪ್ಪು, ಒಪ್ಪುಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೇ 340 ಪುಟದ ಈ ಪುಸ್ತಕದಲ್ಲಿ ಕಾಣಿಸಿದ್ದೇನೆ. ನನ್ನ ಅಭಿಪ್ರಾಯಗಳನ್ನು ಒಂದೆಡೆ ಕಲೆಹಾಕಿ ಇದನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತಿದೆ. ಗಿರೀಶ್ ತಾಳಿಕಟ್ಟೆ ಇದರ ಜವಾಬ್ದಾರಿ ಹೊತ್ತಿದ್ದಾರೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಎಚ್. ಹಾಲೇಶಪ್ಪ, ಕರ್ನಾಟಕ ಜನಶಕ್ತಿ ಕೆ.ಎಲ್. ಅಶೋಕ್, ಮಂಜಪ್ಪ, ರಾಘವೇಂದ್ರ, ರುದ್ರೇಶ್, ಚನ್ನಪ್ಪಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT